ಕುಡ್ಲದ ಪಿಲಿಪರ್ಬ-2026ರ ಚಪ್ಪರ ಮುಹೂರ್ತ ಕಾರ್ಯಕ್ರಮ
Sunday, October 11, 2026
ಮಂಗಳೂರು: ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ನೇತೃತ್ವದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ನಡೆಯಲಿರುವ ಐದನೇ ವರ್ಷದ ‘ಕುಡ್ಲದ ಪಿಲಿ ಪರ್ಬ-2026’ದ ಚಪ್ಪರ ಮುಹೂರ್ತ ಕಾರ್ಯಕ್ರಮ ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಿತು.
ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದಸರಾ ಸಂದರ್ಭದಲ್ಲಿ ಇಡೀ ತುಳುನಾಡಿನಲ್ಲೇ ಹುಲಿವೇಷದ ಸಂಭ್ರಮ ಮನೆ ಮಾಡಿರುತ್ತದೆ. ಇಂದು ಈ ನೆಲದ ಕಲೆ ತುಳುನಾಡು ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ಈ ಜನಪ್ರಿಯತೆ ಜೊತೆಗೆ ಈ ಕಲೆಗೆ ಇನ್ನಷ್ಟು ಮೆರುಗು ನೀಡುವ ನಿಟ್ಟಿನಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಅ.18 ರಂದು ನಡೆಯಲಿರುವ ಐದನೇ ವರ್ಷದ ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ ಹುಲಿವೇಷ ತಂಡಗಳಿಗೂ ಶುಭಹಾರೈಕೆಗಳು. ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಲಿರುವ ಸಾರ್ವಜನಿಕರೆಲ್ಲರಿಗೂ ಪ್ರೀತಿಯ ಸ್ವಾಗತ ಬಯಸುತ್ತಾ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸು ಸಾಧಿಸಲಿ, ಎಂದು ಶುಭ ಹಾರೈಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಮಲಾಕ್ಷ ಬಜಿಲಕೇರಿ, ಕಿರಣ್ ಶೆಣೈ, ನರೇಶ್ ಪ್ರಭು, ಜಗದೀಶ್ ಕದ್ರಿ, ಲಲಿತ್ ಮೆಂಡನ್ ಸೇರಿದಂತೆ ಪ್ರತಿಷ್ಠಾನದ ಪ್ರಮುಖರು ಉಪಸ್ಥಿತರಿದ್ದರು.

