ದ್ವಿಚಕ್ರ ವಾಹನಗಳ ಕಳವು ಪ್ರಕರಣ ಪತ್ತೆ: 7 ಮಂದಿ ಆರೋಪಿಗಳ ಬಂಧನ

ದ್ವಿಚಕ್ರ ವಾಹನಗಳ ಕಳವು ಪ್ರಕರಣ ಪತ್ತೆ: 7 ಮಂದಿ ಆರೋಪಿಗಳ ಬಂಧನ


ಮಂಗಳೂರು: ನಗರದ ಹಲವಡೆ ನಡೆದಿರುವ ದ್ವಿಚಕ್ರ ವಾಹನಗಳ ಕಳವು ಪ್ರಕರಣವನ್ನು ಪತ್ತೆ ಹಚ್ಚಿರುವ ಮಂಗಳೂರು ನಗರ ಪೊಲೀಸರು, ಅಪ್ರಾಪ್ತ ಬಾಲಕರು ಸೇರಿದಂತೆ 07 ಆರೋಪಿಗಳನ್ನು ಬಂಧಿಸಿ, ಕಳವುಗೈದ 6, ಕೃತ್ಯಕ್ಕೆ ಬಳಸಿದ 3 ಸೇರಿದಂತೆ ಒಟ್ಟು 9 ದ್ವಿಚಕ್ರ ವಾಹನಗಳ ವಶಪಡಿಸಿಕೊಂಡಿಸಿದ್ದಾರೆ.

ಮೂಡುಶೆಡ್ಡೆ ಶಿವನಗರದ ಮಹಮ್ಮದ್ ಸಿಯಾಮ್ (19), ಜೋಕಟ್ಟೆಯ ಮುಹಮ್ಮದ್ ನಾಸೀಫ್ ಯಾನೆ ನಸೀಫ್ (19), ಮೂಡುಶೆಡ್ಡೆ ಶಿವನಗರದ ಮುಹಮ್ಮದ್ ರಾಹೀಲ್ (18), ತಿರುವೈಲು ಸದಾಶಿವ ನಗರದ ನಿಖೀಲ್ (18) ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ.

ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ್ ಬಳಿಯಿರುವ ಡಾನ್ ಬಾಸ್ಕೋ ಹಾಸ್ಟೆಲ್ ಬಳಿ ಅಕ್ಟೋಬರ್ 12ರಂದು ನಿಲ್ಲಿಸಿದ್ದ ಕೆ.ಟಿ.ಎಮ್ ಡ್ಯೂಕ್ ಮೋಟಾರು ಸೈಕಲ್, ಅ. 19ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎಫ್‌ಝೀ ಮೋಟಾರ್ ಸೈಕಲ್, ಅ.21 ರಂದು ಅತ್ತಾವರ ಕೆ.ಎಮ್.ಸಿ ಆಸ್ಪತ್ರೆಯ ಬಳಿಯಿರುವ ದುರ್ಗಾ ಹೋಟೇಲ್ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಅ. 22ರಂದು ಹೊಯಿಗೆ ಬಝಾರ್‌ನ ಭಗವತಿ ಅಪಾರ್ಟಮೆಂಟ್ ಕೆಳಗೆ ನಿಲ್ಲಿಸಿದ್ದ ಕೆ.ಟಿ.ಎಂ. ಡ್ಯೂಕ್ ಬೈಕ್ ಕಳವಾಗಿರುತ್ತದೆ. ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಅ. 18ರಂದು ನಿಲ್ಲಿಸಲಾಗಿದ್ದ ರಾಯಲ್ ಎನ್ ಪೀಲ್ಡ್ ಬುಲೆಟ್ ಮೋಟಾರ್ ಸೈಕಲ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅ.21 ರಂದು ಯಮಹಾ ಎಫ್‌ಝೀ ಮೋಟಾರ್ ಸೈಕಲ್ ಕಳವಾಗಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿತ್ತು.

ಕಳವಾಗಿರುವ ದ್ವಿಚಕ್ರ ವಾಹನಗಳ ಆರೋಪಿಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿ , ಆರೋಪಿಗಳು ಕಳವು ಮಾಡಿರುವ ದ್ವಿಚಕ್ರ ವಾಹನಗಳನ್ನು ವಶಪಡಿಕೊಂಡಿಸಿಕೊಳ್ಳಲಾಗಿದೆ. ಕಳವು ಮಾಡಲಾಗಿದ್ದ ಎಲ್ಲಾ 06 ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ 03 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ 4,50,000 ರೂ ಆಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ವಿಚಾರಣೆಯಿಂದ, ಆರೋಪಿಗಳು ಇತರ ದುಶ್ಕೃತ್ಯಗಳಾದ ಸರಗಳ್ಳತನ ಮುಂತಾದ ಕೃತ್ಯಗಳನ್ನು ಎಸಗಿ ಅದರ ಲಾಭಾಂಶದಿಂದ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು. ಬೆಲೆಬಾಳುವ ಮೋಟಾರ್ ಸೈಕಲ್‌ಗಳನ್ನು ಗುರಿಯಾಗಿಸಿ, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ.

ಬಂಧಿತ 4 ಜನ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಬೈಂದೂರು ನೇತೃತ್ವದಲ್ಲಿ ಪಿ.ಎಸ್.ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್ ಮತ್ತು ಮಂಗಳೂರು ದಕ್ಷಿಣ ಠಾಣೆಯ ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article