ಅಶೋಕ್ ಸಿಂಘಾಲ್ ಅವರು ಆದರ್ಶಗಳನ್ನು ಯುವ ಸಮೂಹ ಮೈಗೂಡಿಸಿಕೊಂಡು ಮುನ್ನಡೆಯಬೇಕು: ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಕರೆ
ಧರ್ಮಕ್ಕೆ ತೊಂದರೆ ಉಂಟಾದಾಗಲೆಲ್ಲಾ ದೇವರು ವಿವಿಧ ಅವತಾರಗಳನ್ನು ತಾಳಿ ಧರ್ಮವನ್ನು ಪುನಃ ಸ್ಥಾಪಿಸುತ್ತಾನೆ. ಎಂಬುದನ್ನು ಪುರಾಣಗಳು ಸಾರುತ್ತವೆ. ಇಂದಿನ ಕಾಲದಲ್ಲೂ ಧರ್ಮದ ಮೇಲೆ ವಿವಿಧ ರೀತಿಯ ಸವಾಲುಗಳು ಎದುರಾಗುತ್ತಿದ್ದು, ಅವುಗಳಿಗೆ ಸಾಮಾಜಿಕ, ರಾಜಕೀಯ ಸೇರಿದಂತೆ ಹಲವು ಕಾರಣಗಳಿರಬಹುದು. ಇಂತಹ ಸಂದರ್ಭದಲ್ಲಿ ಧರ್ಮದ ರಕ್ಷಣೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಮಹನೀಯರು ಮತ್ತು ಕಾರ್ಯಕರ್ತರು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಸ್ವಾಮೀಜಿ ಹೇಳಿದರು.
ದೇಶದ ಗಡಿಯನ್ನು ಸೈನಿಕರು ಕಾಯುವಂತೆ, ಧರ್ಮದ ರಕ್ಷಣೆಗಾಗಿ ‘ಧರ್ಮ ಸೈನಿಕ’ರಾಗಿ ಅಶೋಕ್ ಸಿಂಘಾಲ್ ಅವರು ಕಾರ್ಯನಿರ್ವಹಿಸಿದ್ದರು. ಅವರ ಸೇವೆಯಿಂದಾಗಿ ಇಂದು ಅನೇಕರು ಧಾರ್ಮಿಕ ಕಾರ್ಯಗಳಲ್ಲಿ ಧೈರ್ಯದಿಂದ ಮುಂದುವರಿಯಲು ಸಾಧ್ಯವಾಗಿದೆ. ಸರಳ ಹಾಗೂ ಸೌಮ್ಯ ಸ್ವಭಾವದವರಾಗಿದ್ದ ಅಶೋಕ್ ಸಿಂಘಾಲ್ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದ್ದರು. ಅವರ ಸೇವೆ ಹಾಗೂ ವ್ಯಕ್ತಿತ್ವವನ್ನು ಮುಂದಿನ ತಲೆಮಾರುಗಳೂ ಸ್ಮರಿಸುವಂತದ್ದು. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಧರ್ಮ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳು ಸದಾ ಸ್ಮರಣೀಯವಾಗಿರಲಿದೆ ಎಂದರು.
ಸಾಮಾಜಿಕ ಮುಖಂಡ ವೆಂಕಣ್ಣ ಕೊಯ್ಯೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಶೋಕ್ ಸಿಂಘಾಲ್‌ರಂತೆ ಸಮಾಜಮುಖಿಯಾಗಿ ಒಟ್ಟಾಗಿ ಬದುಕಲು ಮುಂದಾಗಬೇಕು ಎಂದರು.
ಆರ್‌ಎಸ್‌ಎಸ್ ಕ್ಷೇತ್ರೀಯ ಸಂಘ ಚಾಲಕ ಡಾ.ವಾಮನ ಶೆಣೈ ದಿಕ್ಸೂಚಿ ಭಾಷಣದಲ್ಲಿ, ಹಿಂದೆ ಸಮಾಜದ ವಿರೋಧದ ನಡುವೆಯೂ ಸಂಘಟನೆ ಕೆಲಸ ಮಾಡಬೇಕಿತ್ತು. ಹಿಂದೂ ಸಮಾಜ ಸಂಘಟಿತ ಮಾತ್ರವಲ್ಲ ಶಕ್ತಿಯುತವಾಗಿರಬೇಕು ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಶ್ರೀಗುರುದೇವ ದತ್ತ ಸಂಸ್ಥಾನಂನ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿದರು.
ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿದರು.
ಅಶೋಕ್ ಸಿಂಘಾಲ್ ಶತಮಾನೋತ್ಸವ ಸಲುವಾಗಿ ವಿಹಿಂಪ ಮಂಗಳೂರು ವಿಭಾಗದಲ್ಲಿ ವರ್ಷಪೂರ್ತಿ ಕೈಗೊಳ್ಳುವ ಕಾರ್ಯಕ್ರಮಗಳ ಕುರಿತು ವಿಹಿಂಪ ಪ್ರಾಂತ ಉಪಾಧ್ಯಕ್ಷ ಶರಣ್ ಪಂಪ್‌ವೆಲ್ ವಿವರ ನೀಡಿದರು.
-ಬಲಿಷ್ಠ ಸಾಮರಸ್ಯ ಪೂರ್ಣ ಹಿಂದೂ ಸಮಾಜ ನಿರ್ಮಾಣದ ಭಾಗವಾಗಿ ದ.ಕ. ಜಿಲ್ಲೆಯನ್ನು ಒಂದು ವರ್ಷದಲ್ಲಿ ಅಸ್ಪೃಶ್ಯತಾ ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನ.
-ಮಂಗಳೂರು ವಿಭಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯಿದೆ, ನಿಯಮಗಳನ್ನು ಬಳಸಿಕೊಂಡು ಗೋಹತ್ಯೆ, ಗೋಕಳ್ಳತನ, ಅಕ್ರಮ ಗೋಸಾಗಾಟ ಮತ್ತು ಅಕ್ರಮ ಕಸಾಯಿಖಾನೆ ತಡೆಯಲು ಬಲಿಷ್ಠ ಗೋರಕ್ಷಾ ಆಂದೋಲನ ಸಂಘಟನೆ.
-ಕೇಂದ್ರ ಮತ್ತು ರಾಜ್ಯಗಳ ಡ್ರಗ್ಸ್ ನಿಷೇಧ ಕಾನೂನು ಬಲಿಷ್ಠವಾಗಿ ಜಾರಿಗೊಳಿಸಲು ಸರ್ಕಾರದ ಜೊತೆ ಸೇರಿ ಕಾರ್ಯನಿರ್ವಹಣೆ. ಶಾಲಾ ಕಾಲೇಜುಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ, ಸಾರ್ವಜನಿಕರ ಕಾವಲು ಪಡೆ ರಚನೆ.
-ಮಂಗಳೂರು ಮಹಾನಗರ, ಮಂಗಳೂರು ಗ್ರಾಮಾಂತರ, ಪುತ್ತೂರು, ಉಡುಪಿ ಮತ್ತು ಕೊಡಗು ಜಿಲ್ಲೆ ಒಳಗೊಂಡ ಮಂಗಳೂರು ವಿಭಾಗದಲ್ಲಿ ವಿಹಿಂಪ ಹೊಸ 100 ಸಮಿತಿ ರಚನೆ.
-ಮಕ್ಕಳಿಗೆ ಧರ್ಮ ಶಿಕ್ಷಣ ಜೊತೆಗೆ ದೇಶಭಕ್ತಿ, ದೇವಭಕ್ತಿ, ಉತ್ತಮ ಸಂಸ್ಕಾರ ಮೂಡಿಸಲು 100 ಹೊಸ ಬಾಲಸಂಸ್ಕಾರ ಕೇಂದ್ರ ಪ್ರಾರಂಭ.
-ಯುವತಿಯರನ್ನು ಸಂಘಟಿಸಿ ನಾಯಕತ್ವ ಗುಣ ಮತ್ತು ರಾಷ್ಟ್ರಪ್ರೇಮ ಬೆಳೆಸುವ ಗುರಿಯಲ್ಲಿ ದುರ್ಗಾವಾಹಿನಿಯ 100 ಘಟಕ ರಚನೆ.
-ಬಜರಂಗದಳದಿಂದ 100 ಸಾಪ್ತಾಹಿಕ ಮಿಲನ್ ನಡೆಸಿ ಯುವಕರಿಗೆ ದೇಶಭಕ್ತಿ, ಸಂಸ್ಕಾರದ ಸಂಕಲ್ಪ.
-ಪ್ರತಿಯೊಬ್ಬ ಹಿಂದುವನ್ನು ಜೋಡಿಸಲು 100 ಹೊಸ ಸತ್ಸಂಗ ಕೇಂದ್ರ ಪ್ರಾರಂಭ.
-ಅಶಕ್ತರಿಗೆ ನೆರವು, ರಕ್ತದಾನ ಇತ್ಯಾದಿ ನೆರವಿಗೆ 100 ಹೊಸ ಸೇವಾ ಕಾರ್ಯ ಯೋಚನೆ.
-ಮೋಸ, ಒತ್ತಾಯದಿಂದ ಮತಾಂತರಗೊಂಡ 100 ಕುಟುಂಬಗಳನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಯೋಜನೆ.
-ಮಂಗಳೂರು ವಿಭಾಗದ ಐದು ಜಿಲ್ಲೆಗಳಲ್ಲಿ ಪ್ರತ್ಯೇಕ ವಿಹಿಂಪ ಕಾರ್ಯಾಲಯ ನಿರ್ಮಾಣ.
-ಮುಂದಿನ ವರ್ಷ ಮಂಗಳೂರಿನಲ್ಲಿ ಅಸ್ಪೃಶ್ಯತೆ ವಿರುದ್ಧ, ಸಾಮರಸ್ಯಕ್ಕಾಗಿ ಬೃಹತ್ ಹಿಂದು ಸಮಾಜೋತ್ಸವ ಆಯೋಜನೆ.
