ಉದ್ಯೋಗಕ್ಕಾಗಿ ಇಸ್ರೇಲ್‌ಗೆ ಹೋದ ಮಂಗಳೂರಿನ ವ್ಯಕ್ತಿ ನಾಪತ್ತೆ

ಉದ್ಯೋಗಕ್ಕಾಗಿ ಇಸ್ರೇಲ್‌ಗೆ ಹೋದ ಮಂಗಳೂರಿನ ವ್ಯಕ್ತಿ ನಾಪತ್ತೆ


ಮಂಗಳೂರು: ಉದ್ಯೋಗ ವೀಸಾದಡಿ ವಿದೇಶವಾದ ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ಕಳೆದ ಹಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇದರಿಂದ ಆತಂಕಗೊಂಡಿರುವ ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆಗೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಅಧಿಕೃತ ಇಮೇಲ್ ದೂರು ಸಲ್ಲಿಸಿ ತುರ್ತು ರಕ್ಷಣೆಗೆ ಮನವಿ ಮಾಡಿದ್ದಾರೆ.

ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್ (41) ನಾಪತ್ತೆಯಾದ ವ್ಯಕ್ತಿ. ಶಡ್ರಕ್ ಇಮ್ಯಾನುವಲ್ ಅವರು ಮಂಗಳೂರಿನ ನೇಮಕಾತಿ ಸಂಸ್ಥೆಯೊಂದರ ಮೂಲಕ ಅಧಿಕೃತ ಉದ್ಯೋಗ ವೀಸಾ ಪಡೆದುಕೊಂಡು ದಿನಾಂಕ 2025ರ ಮೇ 16ರಂದು ಇಸ್ರೇಲ್ಗೆ ಪ್ರಯಾಣ ಬೆಳೆಸಿದ್ದರು. ಅವರು ಇಸ್ರೇಲ್ನ ನಜರೆತ್ ಸಮೀಪದ ನೊಫ್ ಹಗಲಿಲ್ ಎಂಬಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಪತ್ನಿ ಡೇಸಿ ಇಮ್ಯಾನುವಲ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಶಡ್ರಕ್ ಅವರು ನಿತ್ಯವೂ ಕುಟುಂಬದೊಂದಿಗೆ ವಾಟ್ಸ್‌ಆಪ್ ಮೂಲಕ ಸಂಪರ್ಕದಲ್ಲಿದ್ದರು. ಆದರೆ, ಅ.16ರ ರಾತ್ರಿ 8.05ರ ಸುಮಾರಿಗೆ ವಾಟ್ಸ್‌ಆಪ್ ವಿಡಿಯೋ ಕಾಲ್ ಮೂಲಕ ಸುಮಾರು 22 ನಿಮಿಷಗಳ ಕಾಲ ಕುಟುಂಬದೊಂದಿಗೆ ಮಾತನಾಡಿದ್ದರು. ಅದಾದ ನಂತರ ಅವರ ಮೊಬೈಲ್ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಅ.18ರಂದು ಕುಟುಂಬಸ್ಥರು ಹಾಗೂ ಇಸ್ರೇಲ್‌ನಲ್ಲಿರುವ ಅವರ ಸ್ಥಳೀಯ ಸ್ನೇಹಿತರು ನಿರಂತರವಾಗಿ ವಾಟ್ಸ್‌ಆಪ್  ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕಂಪನಿಯ ಕೆಲಸದ ಸ್ಥಳದಲ್ಲೂ ಅವರು ಕಾಣಿಸದೆ ಇರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಪತಿ ಸಂಪರ್ಕಕ್ಕೆ ಸಿಗದೆ ಕಂಗಾಲಾದ ಕುಟುಂಬಸ್ಥರು ನೇರವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿ, ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರ ಕಚೇರಿಯ ಮುಖಾಂತರ ಪತ್ತೆ ಕಾರ್ಯ ಚುರುಕುಗೊಳಿಸಲು ವಿನಂತಿಸಿಕೊಂಡಿದ್ದಾರೆ. ಕಮಿಷನರ್ ಅವರು ಪ್ರಕರಣದ ಗಂಭೀರತೆ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಟುಂಬ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article