ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ

ಪಿಲಿಕುಳ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಯಶಸ್ವಿ


ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವು ದೇಶದಲ್ಲಿಯೇ ವೈಶಿಷ್ಟ್ಯಪೂರ್ಣವಾದ ಪರಿಸರ ಸ್ನೇಹಿ ಪ್ರವಾಸಿ ತಾಣವಾಗಿ ರೂಪಗೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇಲ್ಲಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸಲು ಹಲವಾರು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಅವುಗಳ ಮುಖಾಂತರ ಸಾರ್ವಜನಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ, ಜೀವ ವೈವಿಧ್ಯತೆ, ಕಲೆ ಮತ್ತು ಸಂಸ್ಕೃತಿಯ ಅರಿವನ್ನು ಮೂಡಿಸುವ ಮಹತ್ತರ ಕಾರ್ಯ ನಿರ್ವಹಿಸಲಾಗುತ್ತಿದೆ.


ಈ ಕಾರ್ಯಚಟುವಟಿಕೆಗಳಲ್ಲಿ ಮತ್ಸ್ಯ ಪ್ರಬೇಧಗಳನ್ನು ಗುರುತಿಸಿ, ಬೆಳಸಿ, ಸಂತಾನೋತ್ಪತ್ತಿ ಮಾಡಿ, ಅವುಗಳನ್ನು ಮೂಲ ಆವಾಸ ಸ್ಥಳಕ್ಕೆ ಬಿಡುವ ಕಾರ್ಯವೂ ಸೇರಿದೆ. ಅಲ್ಲದೆ, ಪಿಲಿಕುಳದ ಕೆರೆಯಲ್ಲಿ ಬೆಳಸಿದ ಬಲಿಷ್ಠ ಮೀನುಗಳನ್ನು ಹಿಡಿದು ಪ್ರದರ್ಶಿಸಿ ಸಾರ್ವಜನಿಕರಿಗೆ ಒದಗಿಸುವ ಕಾರ್ಯಕ್ರಮವನ್ನು ಪ್ರತೀ ವರ್ಷ ಹಮ್ಮಿಕೊಳ್ಳಲಾಗುತ್ತದೆ.


ಭಾನುವಾರ ಪಿಲಿಕುಳದ ವಿಶಾಲ ಕೆರೆಯಲ್ಲಿ ಬೆಳಸಿದ ಕಾಟ್ಲಾ, ರೋಹು, ಗೌರಿ, ತಿಲೇಪಿಯಾ ಮೊದಲಾದ ಮೀನುಗಳನ್ನು ಹಿಡಿದು ಮಾರಾಟ ಮಾಡುವ ಮತ್ಸ್ಯೋತ್ಸವ ಮತ್ತು ಮೀನು ಆಹಾರ ಮೇಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.


ಕಾರ್ಯಕ್ರಮವನ್ನು ಮೂಲ್ಕಿ-ಮೂಡಬಿದ್ರಿ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮೀನುಗಳನ್ನು ಕೆರೆಗೆ ಬಿಡುವ ಮೂಲಕ ಉದ್ಘಾಟಿಸಿದರು. ಪ್ರಾಧಿಕಾರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶಿವರಾಮ ಮಲ್ಲಿ ಮತ್ತು ಎನ್.ಜಿ.ಮೋಹನ್, ಪ್ರಾಧಿಕಾರದ ಉಪಸಮಿತಿ ಅಧ್ಯಕ್ಷ ಜಿ. ಶ್ರೀನಿಕೇತನ್, ಮತ್ತು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜನರಲ್ ಮೇನೇಜರ್ ಮಹೇಶ್ ಕುಮಾರ್ ಅವರು ಅತಿಥಿಗಳಾಗಿ ಭಾಗವಹಿಸಿದರು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ. ಅರುಣ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ ಡಾ. ಅಶೋಕ್ ಕೆ.ಆರ್. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜಗನ್ನಾಥ್ ನಿರ್ವಹಿಸಿದರು. ರಾಮಕೃಷ್ಣ ಮರಾಟಿ ವಂದಿಸಿದರು. ಡಾ. ನಿತಿನ್, ಉದಯ ಕುಮಾರ್ ಶೆಟ್ಟಿ, ನಾಗೇಶ್ ಕುಲಾಲ್ ಸಹಕರಿಸಿದರು. ಮೇಳದಲ್ಲಿ ಸಾರ್ವಜನಿಕರು ವಿವಿಧ ಮೀನಿನ ಖಾದ್ಯಗಳನ್ನು ಸವಿದು ಆನಂದಿಸಿದರು. ಅಂದಾಜು 2,000 ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article