ಆತ್ಮವಂಚನೆ ಇಲ್ಲದೆ ಬದುಕುವುದೇ ಗಾಂಧಿಗೆ ಸಲ್ಲಿಸುವ ದೊಡ್ಡ ಗೌರವ: ಡಾ. ಕೆ. ಚಿನ್ನಪ್ಪ ಗೌಡ

ಆತ್ಮವಂಚನೆ ಇಲ್ಲದೆ ಬದುಕುವುದೇ ಗಾಂಧಿಗೆ ಸಲ್ಲಿಸುವ ದೊಡ್ಡ ಗೌರವ: ಡಾ. ಕೆ. ಚಿನ್ನಪ್ಪ ಗೌಡ


ಮಂಗಳೂರು: ಆತ್ಮವಂಚನೆಯಿಲ್ಲದೆ ಬದುಕುವುದು, ‘ನನ್ನ ಬದುಕೇ ನನ್ನ ಸಂದೇಶ’ ಎಂದು ಸಾರಿದ ಮಹಾತ್ಮ ಗಾಂಧೀಜಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವವಾಗಿದೆ ಎಂದು ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು.

ನಗರದ ಟಾಗೋರ್ ಪಾರ್ಕ್‌ನಲ್ಲಿರುವ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗಾಂಧೀ ಜಯಂತಿ ಆಚರಣೆ ಹಾಗೂ ಜೀವಮಾನ ಸಾಧನೆಗಾಗಿ ಚಂದ್ರಕಲಾ ನಂದಾವರ ಅವರಿಗೆ ‘ವರ್ಷದ ವ್ಯಕ್ತಿ’ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ನನ್ನ ಬದುಕೇ ಒಂದು ಸಂದೇಶ’ ಎಂದು ಹೇಳುವ ನೈತಿಕತೆ ಹಾಗೂ ಎದೆಗಾರಿಕೆ ಇಂದಿನವರಲ್ಲಿ ಅಪರೂಪವಾಗಿದೆ. ಸತ್ಯ ಮತ್ತು ಅಹಿಂಸೆ ಅತ್ಯುತ್ತಮ ಕ್ರಿಯೆಗಳಾಗಿದ್ದು, ಇಂತಹ ಮೌಲ್ಯಗಳ ಅನುಸರಣೆ ಉತ್ತಮ ಫಲಿತಾಂಶ ನೀಡುತ್ತದೆ ಎಂಬ ಗಾಂಧೀಜಿಯವರ ಚಿಂತನೆಗಳು ಮಹತ್ವದ್ದಾಗಿವೆ ಎಂದರು.

ಒಬ್ಬ ವ್ಯಕ್ತಿ ಒಂದು ಕಾಲಘಟ್ಟದಲ್ಲಿ ಹೇಳಿದ ಮಾತುಗಳಲ್ಲಿ ನಮಗೆ ಬೇಕಾದ ಕೆಲವನ್ನಷ್ಟೇ ಆಯ್ದುಕೊಂಡು ವಿಮರ್ಶೆ, ವಿವಾದಗಳನ್ನು ನಡೆಸುತ್ತಿರುವ ಇಂದಿನ ಸಂದರ್ಭದಲ್ಲಿ ಗಾಂಧೀಜಿಯವರ ಆದರ್ಶಗಳನ್ನು ಬದಿಗಿಟ್ಟು ಸಮಗ್ರ ಭಾರತದ ಬಗ್ಗೆ ಯೋಚಿಸುವುದು ಸಾಧ್ಯವಿಲ್ಲ. ಭಾರತದ ಅಭಿವೃದ್ಧಿ ಗ್ರಾಮ ಸ್ವರಾಜ್ಯದ ಮೂಲಕ ಸಾಧ್ಯ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಅಹಿಂಸೆಯ ಪ್ರತಿಪಾದನೆಯ ಮೂಲಕ ಜಾಗತಿಕ ಶಾಂತಿಯನ್ನು ಪ್ರತಿಪಾದಿಸಿದ ಅವರು, ಜಗತ್ತಿನಾದ್ಯಂತ ಗೌರವಿಸಲ್ಪಟ್ಟಿದ್ದಾರೆ. ನೂರಕ್ಕೂ ಅಧಿಕ ದೇಶಗಳಲ್ಲಿ ಗಾಂಧೀಜಿಯವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಗಾಂಧೀಜಿ ತಮ್ಮ ಬದುಕಿನಲ್ಲಿ ಹಲವು ಮೌಲ್ಯಗಳನ್ನು ನಂಬಿದ್ದರು. ದುಡಿಮೆಯಿಲ್ಲದ ಸಂಪತ್ತು ಪಾಪ, ತ್ಯಾಗವಿಲ್ಲದ ಪೂಜೆ ವ್ಯರ್ಥ ಎಂಬುದಾಗಿ ಪ್ರತಿಪಾದಿಸಿದ ಅವರು, ತತ್ವವಿಲ್ಲದ ರಾಜಕಾರಣವನ್ನು ಒಪ್ಪುತ್ತಿರಲಿಲ್ಲ. ಇದು ಅವರ ವ್ಯಕ್ತಿತ್ವವನ್ನು ತಿಳಿಸುತ್ತದೆ. ಸಮಾಜವು ಸೂಕ್ಷ್ಮ ಸಂವೇದನೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗಾಂಧೀಜಿಯವರ ಚಿಂತನೆಗಳು ನಮಗೆ ಸಕಾಲಿಕವಾಗಿವೆ ಎಂದರು.

ಚಂದ್ರಕಲಾ ನಂದಾವರ ಅವರು ಹಲವು ಕೃತಿಗಳ ಮೂಲಕ ತುಳು ಹಾಗೂ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದು, ಅವರ ಸಾಧನೆ ಅಭಿನಂದನೀಯವಾಗಿದೆ ಎಂದು ಹೇಳಿದರು.

ರಶಸ್ತಿ ಸ್ವೀಕರಿಸಿ ಮಾತನಾಡಿದ ಚಂದ್ರಕಲಾ ನಂದಾವರ, ತಮ್ಮ ತಂದೆ ಗಾಂಧಿವಾದಿಯಾಗಿದ್ದು, ಅಂತಹ ವಾತಾವರಣದಲ್ಲಿ ತಾನು ಬೆಳೆದಿದ್ದೇನೆ. ಆದ್ದರಿಂದ ಈ ಪ್ರಶಸ್ತಿಯನ್ನು ತಮ್ಮ ತಂದೆಗೆ ಅರ್ಪಿಸುವುದಾಗಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ಅಭಿಪ್ರಾಯ ಹೊಂದಿರುವವರಿಗೆ ಮಾನ್ಯತೆ ದೊರೆಯಬೇಕಾಗಿದೆ. ಬದುಕಿನಲ್ಲಿ ಮಾನವ ಧರ್ಮ ಹಾಗೂ ಮಾನವೀಯತೆಗೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಒಳಿತಿಗಾಗಿ ಕ್ರಿಯಾಶೀಲರಾಗಿರಬೇಕು. ಈ ಸಂದರ್ಭದಲ್ಲಿ ತಟಸ್ಥರಾಗಿ ಉಳಿಯಬಾರದು ಎಂದು ಹೇಳಿದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದದರು. ಕಾರ್ಯದರ್ಶಿ ಡಾ. ಇಸ್ಮಾಯಿಲ್ ಎನ್. ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್, ಇಬ್ರಾಹಿಂ ಕೋಡಿಜಾಲ್, ಜತೆ ಕಾರ್ಯದರ್ಶಿ ಎನ್.ಜಿ. ಮೋಹನ್ ಮೊದಲಾದವರು ಉಪಸ್ಥಿತರಿದ್ದರು. ಎವರೆಸ್ಟ್ ಕ್ರಾಸ್ತಾ ಸನ್ಮಾನ ಪತ್ರ ವಾಚಿಸಿದರು. ಜತೆ ಕಾರ್ಯದರ್ಶಿ ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸಹ ಕೋಶಾಧಿಕಾರಿ ಪ್ರೇಮಚಂದ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article