ದಶಕಗಳ ಕನಸು ನನಸು: ಮಂಗಳೂರು ರೈಲು ಪ್ರದೇಶ ಇಂದಿನಿಂದ ನೈಋತ್ಯ ರೈಲ್ವೆಗೆ

ದಶಕಗಳ ಕನಸು ನನಸು: ಮಂಗಳೂರು ರೈಲು ಪ್ರದೇಶ ಇಂದಿನಿಂದ ನೈಋತ್ಯ ರೈಲ್ವೆಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಪ್ರಯಾಣಿಕರ ದಶಕಗಳ ಕನಸು ಕೊನೆಗೂ ನನಸಾಗಿದೆ. ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಅಧಿಕೃತವಾಗಿ ವರ್ಗಾಯಿಸಲಾಗಿದ್ದು, ಅಕ್ಟೋಬರ್ 1, 2026ರ ಮಧ್ಯರಾತ್ರಿಯಿಂದಲೇ ಈ ವಿಲೀನ ಪ್ರಕ್ರಿಯೆ ಜಾರಿಗೆ ಬಂದಿದೆ ಎಂದು ನೈಋತ್ಯ ವಲಯದ ಮೈಸೂರು ವಿಭಾಗದ ವಿಭಾಗೀಯ ಪ್ರಕಟಣೆ ತಿಳಿಸಿದೆ.

ಈ ಮಹತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ, ನೂತನ ವ್ಯಾಪ್ತಿಯಲ್ಲಿ ರೈಲು ಕಾರ್ಯಾಚರಣೆಗಳು ಹಾಗೂ ಸಾರ್ವಜನಿಕ ಸೇವೆಗಳು ಯಾವುದೇ ತಡೆ ಇಲ್ಲದೇ ಸುಗಮವಾಗಿ ಸಾಗುವಂತೆ ನೋಡಿಕೊಳ್ಳಲು ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (ADRM) ಶಮ್ಮಾಸ್ ಹಮೀದ್ ಅವರು ಮಂಗಳೂರಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ವಿಭಾಗದ ವಿವಿಧ ಶಾಖಾಧಿಕಾರಿಗಳೊಂದಿಗೆ ಮಂಗಳೂರಿಗೆ ಆಗಮಿಸಿದ ಎಡಿಆರ್‌ಎಂ ಶಮ್ಮಾಸ್ ಹಮೀದ್ ಅವರು ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಜೋಕಟ್ಟೆ ಸೇರಿದಂತೆ ಪ್ರಮುಖ ರೈಲ್ವೆ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ಸ್ಥಳೀಯ ರೈಲ್ವೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಕರ್ತವ್ಯ ನಿರ್ವಹಣೆಗೆ ಅಗತ್ಯವಿರುವ ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯಗಳು ಮತ್ತು ತಾಂತ್ರಿಕ ಉಪಕರಣಗಳ ಲಭ್ಯತೆಯನ್ನು ಪರಿಶೀಲಿಸಿದರು.

ರೈಲುಗಳ ಸಂಚಾರ, ಟ್ರ್ಯಾಕ್ ನಿರ್ವಹಣೆ, ಸುರಕ್ಷತಾ ನಿಯಮಗಳು ಹಾಗೂ ಪ್ರಯಾಣಿಕರ ಸೌಲಭ್ಯಗಳ ನಿರ್ವಹಣೆಗೆ ಯಾವುದೇ ರೀತಿಯ ತೊಡಕಾಗದಂತೆ ವಿವಿಧ ಇಲಾಖೆಗಳ ನಡುವೆ ಪರಿಣಾಮಕಾರಿ ಸಮನ್ವಯ ಸಾಧಿಸಲು ಸೂಚಿಸಿದರು.

ಕ್ಷೇತ್ರ ಮಟ್ಟದ ರೈಲ್ವೆ ಸಿಬ್ಬಂದಿ ಹಾಗೂ ಮೈಸೂರು ವಿಭಾಗೀಯ ಕಚೇರಿಯ ನಡುವೆ ಕ್ಷಿಪ್ರ ಸಂವಹನ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. ಆಡಳಿತಾತ್ಮಕವಾಗಿ ಮಹತ್ವದ ಮೈಲಿಗಲ್ಲು. ಮಂಗಳೂರು ರೈಲು ಜಾಲವು ಪಾಲಕ್ಕಾಡ್ ವಿಭಾಗದಿಂದ ಹೊರಬಂದು ಕರ್ನಾಟಕದ ವ್ಯಾಪ್ತಿಯ ನೈಋತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಂಡಿರುವುದು ಕರಾವಳಿ ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹೊಸ ವೇಗ ನೀಡಲಿದೆ. ನೂತನ ವ್ಯಾಪ್ತಿಯಡಿ ರೈಲುಗಳ ಸಂಚಾರ ವೇಳಾಪಟ್ಟಿ, ಪ್ರಯಾಣಿಕರ ಸೌಕರ್ಯ ವಿಸ್ತರಣೆ ಮತ್ತು ನಿಲ್ದಾಣಗಳ ನಿರ್ವಹಣಾ ಪ್ರಕ್ರಿಯೆಗಳು ಯಾವುದೇ ಅಡೆತಡೆಯಿಲ್ಲದೇ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article