ಮಂಗಳೂರು ದಸರಾ: ಶಾರದೆ ಜಲಸ್ತಂಭನ

ಮಂಗಳೂರು ದಸರಾ: ಶಾರದೆ ಜಲಸ್ತಂಭನ


ಮಂಗಳೂರು: ನಗರದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ 9 ದಿನ ಪೂಜಿಸಲಾದ ನವದುರ್ಗೆಯರು ಮತ್ತು ಶಾರದೆಯ ವಿಗ್ರಹಗಳನ್ನು ರಾತ್ರಿಯಿಡೀ ನಡೆದ ಮೆರವಣಿಗೆಯ ನಂತರ ಗುರುವಾರ ಬೆಳಗ್ಗೆ ಜಲಸ್ತಂಭನ ಮಾಡಲಾಯಿತು.

ಬುಧವಾರ ಸಂಜೆ ಗಣಪತಿ ಮತ್ತು ಶಾರದಾ ಪೂಜೆ, ನಾರಾಯಣ ಗುರುಗಳ ಆರಾಧನೆಯೊಂದಿಗೆ ಕುದ್ರೋಳಿಯಿಂದ ಹೊರಟಿದ್ದ ಶೋಭಾಯಾತ್ರೆಗೆ ವೈವಿಧ್ಯಮಯ ಟ್ಯಾಬ್ಲೊಗಳು, ಹುಲಿ ಕುಣಿತ, ಚಂಡೆ, ಸ್ಯಾಕ್ಸೊಫೋನ್ ಸೇರಿದಂತೆ ಬಹುವಿಧ ವಾದ್ಯಗಳ ವಾದನ, ನಾದಸ್ವರ ಮೇಳ, ಲೇಝಿಮ್, ಜಾನಪದ-ಕಲಾ ಕಾರ್ಯಕ್ರಮಗಳು ರಂಗು ತುಂಬಿದ್ದವು.

ಕುದ್ರೋಳಿ, ಲೇಡಿಹಿಲ್ ನಾರಾಯಣಗುರು ವೃತ್ತ, ಲಾಲ್‌ಬಾಗ್, ಪಿವಿಎಸ್ ವೃತ್ತ, ಕೆ.ಎಸ್ ರಾವ್ ರಸ್ತೆ, ಗಡಿಯಾರ ಗೋಪುರ ವೃತ್ತ, ಗಣಪತಿ ಕಾಲೇಜು ರಸ್ತೆ, ಕಾರ್‌ಸ್ಟ್ರೀಟ್ ಮೂಲಕ ಸಾಗಿ ಕುದ್ರೋಳಿಗೆ ವಾಪಸ್ ತಲುಪಿದಾಗ ಗುರುವಾರ ಬೆಳಕು ಹರಿದಿತ್ತು.

ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಮೊದಲು, ಗಣಪತಿ ವಿಗ್ರಹವನ್ನು ವಿಸರ್ಜಿಸಲಾಯಿತು. ಈ ಸಂದರ್ಭದಲ್ಲಿ ಗಣಪತಿ ಬಪ್ಪ ಮೋರಯಾ ಘೋಷಣೆ ಎಲ್ಲೆಡೆ ಮೊಳಗಿತು. ನಂತರ ನವದುರ್ಗೆಯರ ಪ್ರತಿಮೆಗಳನ್ನು ಒಂದೊಂದಾಗಿ ನೀರಿಗೆ ಇಳಿಸಲಾಯಿತು. ಆಗ ಗೋವಿಂದ ಹರಿ ಗೋವಿಂದ ಘೋಷಣೆ ಮೊಳಗಿತು. ಭಾರತ್ ಮಾತಾ ಕೀ ಜೈ ಕೂಡ ಕೇಳಿಬಂತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article