ವಿದ್ಯಾರ್ಥಿಗಳಿಗೆ ಬಾಂಡ್ ಯಾವ ನ್ಯಾಯ: ಅಭಾವಿಪ

ವಿದ್ಯಾರ್ಥಿಗಳಿಗೆ ಬಾಂಡ್ ಯಾವ ನ್ಯಾಯ: ಅಭಾವಿಪ

ಮಂಗಳೂರು: ನಗರದ ಆಗ್ನೆಸ್ ಕಾಲೇಜಿನಲ್ಲಿ ದಸರಾ ಹಬ್ಬದ ಸಂದರ್ಭ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಪ್ರತಿಭಟಿಸಿದ ಸಂದರ್ಭ ಎಬಿವಿಪಿ ನಾಯಕರನ್ನು ಬಂಧಿಸಿದ ಪೊಲೀಸರು ವಿದ್ಯಾರ್ಥಿಗಳಿಂದ ಮುಂದೆ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಒಂದು ಲಕ್ಷದ ಬಾಂಡ್‌ಗೆ ಬರೆಯಲು ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಯಾವ ರೀತಿಯ ನ್ಯಾಯ ಎಂದು ಎಬಿವಿಪಿ ನಾಯಕರು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಸುವಿತ್ ಶೆಟ್ಟಿ, ಮಂಗಳೂರಿನಲ್ಲಿ ಎಷ್ಟೊಂದು ಪ್ರತಿಭಟನೆಗಳು ನಡೆದಿವೆ. ಯಾವುದಕ್ಕೆಲ್ಲಾ ಬಾಂಡ್ ಬರೆಸಲಾಗಿದೆ ಎಂದು ಅವರು ಪ್ರಶ್ನಿಸಿದರು.

ದಸರಾ ಸಂದರ್ಭ ಪರೀಕ್ಷೆಯನ್ನು ವಿರೋಧಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಲು ಎಬಿವಿಪಿ ನಾಯಕರು ಅ.10ರಂದು ಭೇಟಿ ನೀಡಿದ್ದ ವೇಳೆ ಕಾಲೇಜು ಆಡಳಿತ ಮಂಡಳಿ ಅವರಲ್ಲಿ ಮಾತನಾಡುವ ಸೌಜನ್ಯ ತೋರಿಸಿಲ್ಲ. ಹಾಗಾಗಿ ಅ. 12ರಂದು ಕಾಲೇಜಿನ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಹೋರಾಟ ನಡೆಸಲು ನಿರ್ಧರಿಸಿದ್ದು ಅದಕ್ಕೆ ಎಬಿವಿಪಿ ಬೆಂಬಲ ನೀಡಿತ್ತು ಎಂದವರು ಹೇಳಿದರು.

ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯೊಂದರ ಎದುರು ಹೋರಾಟ ನಡೆಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗೆ, ನಾವು ಪ್ರತಿಭಟನೆಯ ಉದ್ದೇಶದಿಂದ ಹೋಗಿರಲಿಲ್ಲ ಎಂದರು.

ಈ ಸಂದರ್ಭ ಅಲ್ಲಿದ್ದ ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವ ಅಧಿಕಾರ ಅವರಿಗೆ ಕೊಟ್ಟವರಾರು ಎಂದು ಪ್ರಶ್ನಿಸಿದ ಸುವಿತ್ ಶೆಟ್ಟಿ, ಆ ಅಧಿಕಾರಿ ಸಂಜೆಯೊಳಗೆ ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಕ್ರಮ ಆಗಬೇಕು. ಇಲ್ಲವಾದಲ್ಲಿ ನಾಳೆಯಿಂದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ಮುಖಂಡರಾದ ಶಶಾಂಕ್, ಹರ್ಷಿತಾ, ತಸ್ಮಯ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article