ದಸರಾ ನೆಪದಲ್ಲಿ ಶಿಕ್ಷಣ ಸಂಸ್ಥೆಗಳನ್ನು ರಾಜಕೀಯಗೊಳಿಸುವ ಬಿಜೆಪಿ–ಎಬಿವಿಪಿ ಪ್ರಯತ್ನಕ್ಕೆ ಎಸ್‌ಎಫ್‌ಐ ಖಂಡನೆ
ಮಂಗಳೂರು: ಸಂತ ಆಗ್ನೆಸ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ದಸರಾ ಅವಧಿಯಲ್ಲಿ ನಡೆಯಲಿರುವ ಪರೀಕ್ಷೆಗಳನ್ನು ಮುಂದೂಡಬೇಕೆಂದು ಒತ್ತಾಯಿಸಿ ನಡೆಸಿದ ಪ್ರತಿಭಟನೆಯ ಹಿಂದೆ ಬಿಜೆಪಿ ಮತ್ತು ಎಬಿವಿಪಿಯ ರಾಜಕೀಯ ಅಜೆಂಡಾ ಅಡಗಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿನ್ನೆ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ.
ದಸರಾ ಹಬ್ಬದ ಹೆಸರಿನಲ್ಲಿ ವಿದ್ಯಾರ್ಥಿಗಳ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಶಾಸಕರು ಮತ್ತು ಎಬಿವಿಪಿ ನಿಲ್ಲಿಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯೇ ನಿಜವಾದ ಕಾಳಜಿಯಾಗಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಇವರೇಕೆ ಮೌನ ವಹಿಸಿದ್ದಾರೆ ಎಂದು ಉತ್ತರಿಸಬೇಕು.
ಈವರೆಗೆ ದಸರಾ ಹಬ್ಬದ ಸಂದರ್ಭದಲ್ಲಿ ಪದವಿ ಕಾಲೇಜುಗಳಿಗೆ ಸಾರ್ವತ್ರಿಕ ರಜೆ ನೀಡುವ ಪದ್ಧತಿ ಇರಲಿಲ್ಲ. ಶೈಕ್ಷಣಿಕ ಕ್ಯಾಲೆಂಡರ್‌ನಲ್ಲಿ ಘೋಷಿಸಲಾದ ಸರ್ಕಾರಿ ರಜೆಗಳ ಆಧಾರದಲ್ಲಿಯೇ ಕಾಲೇಜುಗಳಿಗೆ ರಜೆ ನೀಡಲಾಗುತ್ತಿತ್ತು. ಅಷ್ಟು ಕಾಳಜಿ ಇರುತ್ತಿದ್ದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ದಸರಾ ಅವಧಿಯಲ್ಲಿ ಪದವಿ ಕಾಲೇಜುಗಳಿಗೆ ರಜೆ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಯಾಕೆ ಕ್ರಮ ಕೈಗೊಳ್ಳಲಿಲ್ಲ? ಅಂದು ನೆನಪಾಗದ ದಸರಾ ಪ್ರೀತಿ ಈಗ ಏಕಾಏಕಿ ಉಕ್ಕಿ ಹರಿಯುತ್ತಿರುವುದರ ಹಿಂದಿನ ಉದ್ದೇಶವೇನು?
ರಾಜ್ಯ ಸರ್ಕಾರ ದಸರಾ ಹಬ್ಬದ ಸಿದ್ಧತೆಗಳನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ, ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಯೇ ಈ ವಿಚಾರವನ್ನು ಪ್ರಸ್ತಾಪಿಸಿ ಸೂಕ್ತ ನಿರ್ಧಾರಕ್ಕೆ ಒತ್ತಾಯಿಸಬಹುದಿತ್ತು. ಆದರೆ, ಅಂತಹ ಪ್ರಜಾಸತ್ತಾತ್ಮಕ ಮಾರ್ಗವನ್ನು ಬಿಟ್ಟು ನಿರ್ದಿಷ್ಟ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನೆಗಳ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸ್ಥಳೀಯ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಇವರಿಬ್ಬರಿಗೂ ಜನರ ನೈಜ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಕನಿಷ್ಟ ಕಾಳಜಿಗಳೇ ಇಲ್ಲದೇ ಇರುವಾಗ ರಾಜಕೀಯ ಲಾಭಕ್ಕಾಗಿ ಇಂತಹ ವಿವಾದಗಳೇ ಬೇಕಾಗಿವೆಯೇ ಎಂಬ ಪ್ರಶ್ನೆ ವಿದ್ಯಾರ್ಥಿ ಸಮೂಹದಲ್ಲಿ ಮೂಡುತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಕಾಡುತ್ತಿರುವ ದುಬಾರಿ ಡೊನೇಶನ್ ಹಾವಳಿ, ಶಿಕ್ಷಣದ ಹೆಚ್ಚುತ್ತಿರುವ ವೆಚ್ಚ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಎದುರಾಗುತ್ತಿರುವ ಆರ್ಥಿಕ ಸಂಕಷ್ಟ, ಸರ್ಕಾರಿ ಶಾಲೆಗಳ ಕೊರತೆ, ನಿರಂತರ ನಿರ್ಲಕ್ಷ್ಯ ಹಾಗೂ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯದ ಬಗ್ಗೆ ಬಿಜೆಪಿ ಮತ್ತು ಎಬಿವಿಪಿ ಯಾವತ್ತಾದರೂ ಹೋರಾಟ ನಡೆಸಿದ ಉದಾಹರಣೆಗಳಿವೆಯೇ?. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಇಂತಹ ಗಂಭೀರ ಸಮಸ್ಯೆಗಳನ್ನು ಬದಿಗಿಟ್ಟು, ಧಾರ್ಮಿಕ ಭಾವನೆಗಳನ್ನು ಮುನ್ನೆಲೆಗೆ ತಂದು ಶಿಕ್ಷಣ ಸಂಸ್ಥೆಗಳನ್ನು ರಾಜಕೀಯ ಸಂಘರ್ಷದ ಕೇಂದ್ರಗಳನ್ನಾಗಿ ಮಾಡುವ ದುರುದ್ದೇಶವನ್ನು ಎಸ್ಎಫ್ಐ ಒಪ್ಪುವುದಿಲ್ಲ.
ದಸರಾ ಅವಧಿಯಲ್ಲಿ ಪರೀಕ್ಷೆ ಅಥವಾ ತರಗತಿಗಳನ್ನು ನಡೆಸಬಾರದು ಎಂಬುದು ವಿದ್ಯಾರ್ಥಿಗಳ ಸಾಮೂಹಿಕ ಬೇಡಿಕೆಯಾಗಿದ್ದರೆ, ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ವಿಶ್ವವಿದ್ಯಾಲಯ ಅಥವಾ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿ ಮತ್ತು ಹಬ್ಬದ ಆಚರಣೆಗೆ ಇರುವ ಅವಕಾಶಗಳ ನಡುವೆ ಸಮತೋಲನ ಸಾಧಿಸುವುದು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಇದನ್ನು ರಾಜಕೀಯ ಸಂಘರ್ಷವನ್ನಾಗಿ ಪರಿವರ್ತಿಸುವುದು ಸರಿಯಲ್ಲ.
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಬದಲು, ಅವರ ಭಾವನೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವ ಬಿಜೆಪಿ ಎಬಿವಿಪಿಯ ನಡೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಎಸ್ಎಫ್ಐ ಜಿಲ್ಲಾ ಅಧ್ಯಕ್ಷ ಅಜ್ಲಾನ್, ಕಾರ್ಯದರ್ಶಿ ವಿನಾಯಕ ಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.