ಶಾಸಕರುಗಳಿಂದ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಷಡ್ಯಂತ್ರ: ಎ.ಸಿ. ವಿನಯರಾಜ್ ಆರೋಪ
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಪೊಲೀಸ್ ಆಯುಕ್ತರ ಕಟ್ಟುನಿಟ್ಟಿನ ಕಾನೂನು ಕ್ರಮದಿಂದಾಗಿ ನಗರ ಶಾಂತವಾಗಿದೆ. ಆದರೆ ಸಮಾಜದಲ್ಲಿ ಧರ್ಮದ ಆಧಾರದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶಟ್ಟಿ ಅವರು ಎಬಿವಿಪಿ ಕಾರ್ಯಕರ್ತರನ್ನು ಕಳುಹಿಸಿ ನಗರದ ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚಿ, ಈ ಪ್ರತಿಭಟನೆ ಮಾಡಿಸಿದ್ದಾರೆ. ಇದು ಪೂರ್ವಯೋಜಿತ ದಾಳಿ. ಸೈಂಟ್ ಆಗ್ನೆಸ್ ಕಾಲೇಜನ್ನು ಅಲ್ಪಸಂಖ್ಯಾತ ಕ್ರೈಸ್ತ ಧರ್ಮ ಭಗಿನಿಯರು ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ. 104 ವರ್ಷಗಳಿಂದ ಯಾವುದೇ ಬೇಧಭಾವವಿಲ್ಲದೆ ವಿದ್ಯಾದಾನ ಮಾಡಿದ ಸಂಸ್ಥೆಯನ್ನು ಧಾರ್ಮಿಕ ನೆಲೆಯಲ್ಲಿ ಗುರಿಯಾಗಿಸುವುದು ಅಕ್ಷಮ್ಯ ಅಪರಾಧ ಎಂದರು.
ಸರಕಾರ ಘೋಷಿಸಿದ ಎಲ್ಲಾ ಧರ್ಮಗಳ ಹಬ್ಬಗಳಿಗೆ, ಮತ್ತು ಸರಕಾರ ಘೋಷಿಸದ ರಜೆಗಳನ್ನು ಕೃಷ್ಣ ಜನ್ಮಾಷ್ಟಮಿ, ನಾಗರ ಪಂಚಮಿಗೂ ಈ ಕಾಲೇಜು ರಜೆ ನೀಡುತ್ತದೆ. ಹೀಗಿರುವಾಗ ಇದು ಹಿಂದೂ ವಿರೋಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದ ಅವರು, ಸ್ವಾಯತ್ತ ಕಾಲೇಜು ಸರಕಾರದ ನಿಯಮದಂತೆ ಪರೀಕ್ಷೆ ನಡೆಸಬೇಕು ಹಾಗೂ ರಜೆಗಳನ್ನು ಘೋಷಿಸಬೇಕು. 90 ದಿನ ತರಗತಿ ಬಳಿಕ ಒಂದು ವಾರ ರಿವಿಜನ್ ರಜೆ ನೀಡಿ ಪರೀಕ್ಷೆ ನಡೆಸಬೇಕು. ಪರೀಕ್ಷೆಗೆ ಸಂಬಂಧಿಸಿ ಡ್ರಾಫ್ಟ್ ಟೈಮ್ ಟೇಬಲ್ ಅನ್ನು ಒಂದು ತಿಂಗಳ ಮೊದಲೇ ನೋಟೀಸ್ ಬೋರ್ಡ್ನಲ್ಲಿ ಹಾಕಲಾಗುತ್ತದೆ. ಬದಲಾವಣೆ ಬೇಕಿದ್ದರೆ 15 ದಿನದೊಳಗೆ ರಿಜಿಸ್ಟ್ರಾರ್ (ಪರೀಕ್ಷೆ) ಅವರಿಗೆ ಲಿಖಿತ ಮನವಿ ಕೊಡಬೇಕು. ಯಾವ ವಿದ್ಯಾರ್ಥಿಯೂ ಪರೀಕ್ಷೆ ಮುಂದೂಡುವಂತೆ ಸಂಪರ್ಕಿಸಿರಲಿಲ್ಲ ಎಂದು ಆಡಳಿತ ಮಂಡಳಿ ಹೇಳಿಕೆ ನೀಡಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಜಿಲ್ಲೆಯ ಇತರ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತ್ತು. ಅಲ್ಲಿ ಎಬಿವಿಪಿ ಏಕೆ ಪ್ರತಿಭಟನೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಬಿಜೆಪಿ ಮತ್ತು ಸಂಘ ಪರಿವಾರದ ಧರ್ಮಾಧಾರಿತ ರಾಜಕಾರಣಕ್ಕೆ ಸಾಕ್ಷಿ. ವಿದ್ಯಾರ್ಥಿಗಳಿಂದ ಧರ್ಮದ ಆಧಾರದ ಮೇಲೆ ಅವಮಾನಕಾರಿ, ನಿಂದನಾತ್ಮಕ ಮಾತುಗಳನ್ನು ಹೇಳಿಸಿರುವುದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ವಿದ್ಯಾರ್ಥಿ ಸಂಘಟನೆಯ ಹೆಸರಿನಲ್ಲಿ ಅಪ್ರಾಪ್ತ ಮತ್ತು ಯುವ ಮನಸ್ಸಿನಲ್ಲಿ ದ್ವೇಷ ಬಿತ್ತಿ, ಅವರನ್ನು ರಾಜಕೀಯ ಸರಕಾಗಿ ಬಳಸುವುದು ಸಮಾಜ ವಿರೋಧಿ ನಡೆ ಎಂದರು.
ಪರೀಕ್ಷಾ ವೇಳಾಪಟ್ಟಿಯಂತಹ ಶೈಕ್ಷಣಿಕ ವಿಷಯವನ್ನು ರಾಜಕೀಯ, ಧಾರ್ಮಿಕ ಸಂಘವನ್ನಾಗಿಸುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ. ಇಂತಹ ವಿಷಯಗಳನ್ನು ಪ್ರಚೋದನೆ, ಪ್ರತಿಭಟನೆಯಿಂದಲ್ಲ, ಸಂವಾದದ ಮೂಲಕ ಪರಿಹರಿಸಬೇಕು. ಶಾಸಕರು ಜನತೆ ಮತ್ತು ಕಾಲೇಜಿನ ಕ್ಷಮೆ ಕೋರಬೇಕು ಎಂದು ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಪ್ಪಿ, ಅನಿಲ್ ಕುಮಾರ್, ಪ್ರಕಾಶ್ ಸಾಲ್ಯಾನ್, ನೀರಜ್ ಪಾಲ್, ಹೊನ್ನಯ್ಯ, ಉದಯ್ ಆಚಾರ್ ಉಪಸ್ಥಿತರಿದ್ದರು.