ಎಸ್‌ಐಆರ್ ಪ್ರಕ್ರಿಯೆ: ಕಾಂಗ್ರೆಸ್ ಪಕ್ಷ ಜನರಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ: ಸಂಸದ ಬ್ರಿಜೇಶ್ ಚೌಟ ಆರೋಪ
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಸಹಭಾಗಿತ್ವಕ್ಕಾಗಿ ಬೂತ್ ಮಟ್ಟದ ಏಜೆಂಟ್ (ಬಿಎಲ್‌ಎ-2)ಗಳಿಗೆ ಜವಾಬ್ದಾರಿ ನೀಡಲಾಗುತ್ತದೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಹಕರಿಸುವುದು ಅವರ ಕರ್ತವ್ಯ. ಆದರೆ, ಎಸ್‌ಐಆರ್ ಸಂದರ್ಭದಲ್ಲಿ ಬಿಎಲ್‌ಎ-2ಗಳನ್ನು ಭಯಪಡಿಸುವ ಹಾಗೂ ಪ್ರಕ್ರಿಯೆಗೆ ಅಡ್ಡಿಪಡಿಸುವ ಕೆಲಸ ನಡೆಯುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವುದನ್ನೂ ಟೀಕಿಸಿದ ಅವರು, ಸಾಂವಿಧಾನಿಕ ಸಂಸ್ಥೆಗಳ ಕಾರ್ಯವಿಧಾನ ಮತ್ತು ಪ್ರತಿಭಟನೆಗೆ ಇರುವ ಸ್ಥಳದ ಬಗ್ಗೆ ಕನಿಷ್ಠ ಅರಿವು ಇರಬೇಕು ಎಂದರು. ಚುನಾವಣಾ ಆಯೋಗದ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ 5.54 ಕೋಟಿಗೂ ಅಧಿಕ ಮತದಾರರಿದ್ದರೂ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 4.46 ಕೋಟಿ ಮತದಾರರಿದ್ದಾರೆ ಎಂದು ಕಾಂಗ್ರೆಸ್ ಮಾಡುತ್ತಿರುವ ಆರೋಪದಲ್ಲಿ ಗೊಂದಲವಿದೆ. ಕರಡು ಮತದಾರರ ಪಟ್ಟಿ ಅಂತಿಮ ಪಟ್ಟಿಯಲ್ಲ. ಕರಡುಪಟ್ಟಿ ಪ್ರಕಟವಾದ ಬಳಿಕವೂ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ ಎಂದು ಚೌಟ ತಿಳಿಸಿದರು.
ಫಾರ್ಮ್-7 ಡಿಲೀಷನ್ ಆದೇಶವಲ್ಲ
ಫಾರ್ಮ್-7 ಮೂಲಕ ಮತದಾರರ ಹೆಸರುಗಳನ್ನು ಏಕಪಕ್ಷೀಯವಾಗಿ ಅಳಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಒಬ್ಬ ಮತದಾರ ಸ್ಥಳಾಂತರಗೊಂಡಿದ್ದಾನೆ, ಮೃತಪಟ್ಟಿದ್ದಾನೆ ಅಥವಾ ಭಾರತೀಯ ಪ್ರಜೆಯಲ್ಲ ಎಂಬ ಅನುಮಾನವಿದ್ದಲ್ಲಿ ಫಾರ್ಮ್-7 ಮೂಲಕ ಆಕ್ಷೇಪಣೆ ಸಲ್ಲಿಸಬಹುದು. ಬಳಿಕ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿ, ಆಕ್ಷೇಪಣೆ ಸತ್ಯವೆಂದು ದೃಢಪಟ್ಟರೆ ಮಾತ್ರ ಹೆಸರು ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತದೆ ಎಂದರು.
"ಫಾರ್ಮ್-7 ಸಲ್ಲಿಸಿದ ಕೂಡಲೇ ಮತದಾರರ ಹೆಸರು ಡಿಲೀಟ್ ಆಗುವುದಿಲ್ಲ. ಆಕ್ಷೇಪಣೆಯ ಬಳಿಕ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ನಿಗದಿತ ಪ್ರಕ್ರಿಯೆ ಇದೆ. ಹೆಸರು ಅಳಿಸಿದರೂ ಮತ್ತೆ ಫಾರ್ಮ್-6 ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ" ಎಂದು ಹೇಳಿದರು.
ಫಾರ್ಮ್-7 ಮೂಲಕ ಅಲ್ಪಸಂಖ್ಯಾತ ಮತದಾರರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಯಾರದ್ದೇ ಮತ ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂಬುದಕ್ಕೆ ಕಾಂಗ್ರೆಸ್ ಬಳಿ ನಿರ್ದಿಷ್ಟ ದಾಖಲೆಗಳಿದ್ದರೆ ಚುನಾವಣಾ ಆಯೋಗದ ಮುಂದೆ ಮಂಡಿಸಲಿ ಎಂದು ಸವಾಲು ಹಾಕಿದರು.
"ಸಾಕ್ಷ್ಯವಿಲ್ಲದೆ ಆರೋಪ ಬೇಡ"
ಮತದಾರರ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಆರೋಪಿಸುವ ಮೊದಲು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ನೀಡಬೇಕು ಎಂದು ಚೌಟ ಒತ್ತಾಯಿಸಿದರು. ಚುನಾವಣಾ ಆಯೋಗ, ಸಂಸತ್ತು, ಸುಪ್ರೀಂಕೋರ್ಟ್ ಸೇರಿದಂತೆ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಕಾಂಗ್ರೆಸ್ ನಿರಂತರವಾಗಿ ಅನುಮಾನ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಎಂಬುದು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹಾಗೂ ಅರ್ಹ ಮತದಾರರ ಹಕ್ಕನ್ನು ರಕ್ಷಿಸುವ ಪ್ರಕ್ರಿಯೆಯಾಗಿದೆ. ಅನರ್ಹರ ಹೆಸರುಗಳು ಪಟ್ಟಿಯಲ್ಲಿ ಉಳಿದರೆ ಅರ್ಹ ಮತದಾರರ ಮತದಾನದ ಮೌಲ್ಯಕ್ಕೂ ಧಕ್ಕೆಯಾಗುತ್ತದೆ. ಹೀಗಾಗಿ ಶುದ್ಧ ಮತದಾರರ ಪಟ್ಟಿ ಪ್ರತಿಯೊಬ್ಬ ಮತದಾರನ ಹಕ್ಕು ಎಂದು ಹೇಳಿದರು.
ಕಾರ್ಯಕರ್ತರಿಗೆ ಬೆದರಿಕೆ ಸಹಿಸದು
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾನೂನುಬದ್ಧವಾಗಿ ಭಾಗವಹಿಸುತ್ತಿದ್ದಾರೆ. ಅವರನ್ನು ಬೆದರಿಸುವ ಅಥವಾ ಒತ್ತಡಕ್ಕೆ ಒಳಪಡಿಸುವ ಪ್ರಯತ್ನ ನಡೆದರೆ ಬಿಜೆಪಿ ಮೌನವಾಗಿರುವುದಿಲ್ಲ ಎಂದು ಚೌಟ ಎಚ್ಚರಿಸಿದರು.
"ಆಕ್ಷೇಪಣೆಗೆ ಉತ್ತರ ಪರಿಶೀಲನೆ, ಬೆದರಿಕೆ ಅಲ್ಲ. ನಿಗದಿತ ಕಾನೂನು ಪ್ರಕ್ರಿಯೆಯ ಮೂಲಕವೇ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು" ಎಂದರು.
ಕಾಂಗ್ರೆಸ್ ಎಸ್‌ಐಆರ್ ಪ್ರಕ್ರಿಯೆಗೆ ಸಹಕರಿಸುವ ಬದಲು ಕೋಮುವಾದದ ಬಣ್ಣ ನೀಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಆರೋಪಗಳ ನ್ನು ನಿಲ್ಲಿಸಿ ಚುನಾವಣಾ ಆಯೋಗದ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಮಾಧ್ಯಮ ಸಹಕಾರಕ್ಕೆ ಮನವಿ
ಎಸ್‌ಐಆರ್ ಎಂದರೆ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ. ಈ ಸಂದರ್ಭದಲ್ಲಿ ಮಾಧ್ಯಮಗಳು ವಾಸ್ತವಾಂಶಗಳನ್ನು ಜನರಿಗೆ ತಿಳಿಸುವ ಮೂಲಕ ಸುಳ್ಳು ಮಾಹಿತಿ ಮತ್ತು ಗೊಂದಲ ನಿವಾರಣೆಗೆ ಸಹಕರಿಸಬೇಕು ಎಂದು ಚೌಟ ಮನವಿ ಮಾಡಿದರು.
"ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಇರುವುದಷ್ಟೇ ಅಲ್ಲ, ಅನರ್ಹರ ಹೆಸರು ಇಲ್ಲದಿರುವುದೂ ಪ್ರತಿಯೊಬ್ಬ ಮತದಾರನ ಹಕ್ಕು. ಶುದ್ಧ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಬಲ" ಎಂದು ಅವರು ಹೇಳಿದರು.
ಎಸ್‌ಐಆರ್ ಕುರಿತು ಸಾಕ್ಷ್ಯಾಧಾರವಿಲ್ಲದ ಆರೋಪಗಳು ಮುಂದುವರಿದರೆ ಚುನಾವಣೆ ಪ್ರಕ್ರಿಯೆಯ ಬಗ್ಗೆ ಜನರಲ್ಲಿ ಅನಗತ್ಯ ಅನುಮಾನ ಮೂಡಲಿದೆ. ಆದ್ದರಿಂದ ಆರೋ ಪಗಳ ಬದಲಿಗೆ ನಿಗದಿತ ಪ್ರಕ್ರಿಯೆಯನ್ನು ಪಾಲಿಸಿ, ವಾಸ್ತವಾಂಶಗಳ ಆಧಾರದ ಮೇಲೆ ಚರ್ಚೆ ನಡೆಯಬೇಕು ಎಂದು ಚೌಟ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪೂಜಾ ಪೈ, ಪೂರ್ಣಿಮಾ, ಸುಜಿತ್ ಪ್ರತಾಪ್, ರಾಜಗೋಪಾಲ ರೈ, ವಸಂತ ಜೆ.ಪೂಜಾರಿ, ಜೀವನ್ ಕುಮಾರ್ ತೊಕ್ಕೊಟ್ಟು, ಸಂಜಯ ಪ್ರಭು ಇದ್ದರು.