ಹಳೆಯಂಗಡಿಯಲ್ಲಿ ಸ್ವಚ್ಛತಾ ಅಭಿಯಾನ
ಸ್ವಚ್ಛತಾ ಕಾರ್ಯಕ್ರಮಕ್ಕೆ ಹಳೆಯಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೇಶ ಚೌಟ. ಕೆ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಚಾಲನೆ ನೀಡಿದರು.
ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ದ್ವಾರದಿಂದ ಮುಂಡ ಬೀಚ್‍ವರೆಗೆ ಬೀಚ್ ಸ್ವಚ್ಛತಾ ಮಹಾ ಅಭಿಯಾನ ನಡೆಯಿತು. ಅಭಿಯಾನದ ಸಂದರ್ಭದಲ್ಲಿ ಬೀಚ್‍ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹೆಕ್ಕಿ ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು.
ಈ ಸ್ವಚ್ಛತಾ ಅಭಿಯಾನದಲ್ಲಿ ಯುವಕ, ಯುವತಿ, ಮಹಿಳಾ ಮಂಡಲ, ಅನೇಕ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಸದಸ್ಯರು, ಪಂಚಾಯಿತಿನ ಮಾಜಿ ಸದಸ್ಯರು, ಪಂಚಾಯಿತಿನ ಸಿಬ್ಬಂದಿಗಳು, ಪಂಚಾಯಿತಿನ ಪೌರಕಾರ್ಮಿಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದರು.
ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಸಂಘ-ಸಂಸ್ಥೆಗಳಿಗೆ ಹಳೆಯಂಗಡಿ ಗ್ರಾಮ ಪಂಚಾಯತ್ ವತಿಯಿಂದ ಕಿರು ಸ್ಮರಣೆ ಮತ್ತು ಪ್ರಸಂಶನ ಪತ್ರ ನೀಡಿ ಗೌರವಿಸಲಾಯಿತು. ಸ್ವಚ್ಛತಾ ಅಭಿಯಾನದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭವು ಶ್ರೀ ಭಗವತಿ ದೇವಸ್ಥಾನ ಸಸಿತ್ಲು ಇದರ ವಠಾರದಲ್ಲಿ ನಡೆಯಿತು. ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣದ ಸಂದೇಶವನ್ನು ಸಾರಿದ ಈ ಅಭಿಯಾನವು ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.