ರಕ್ತದಾನ ಮಾನವೀಯತೆಯ ಸಂಕಲ್ಪ ಮತ್ತು ದೃಢ ನಿರ್ಧಾರ: ಚಂದ್ರಹಾಸ್ ಕದ್ರಿ
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ, ಲಯನ್ಸ್ ಕ್ಲಬ್ ಮಂಗಳೂರು ಸ್ಫೂರ್ತಿ, ಯುವ ರೆಡ್ ಕ್ರಾಸ್, ಎನ್ಎಸ್ಎಸ್, ರೆಡ್ ರಿಬ್ಬನ್ ಕ್ಲಬ್, ವಿದ್ಯಾರ್ಥಿ ಸಂಘ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವ್ಯಕ್ತಿ ದಾನ ಮಾಡಿದ ರಕ್ತದಿಂದ ಮೂವರು ವ್ಯಕ್ತಿಗಳ ಜೀವ ಉಳಿಸಲು ಸಾಧ್ಯವಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ; ಅದು ಮಾನವ ದೇಹದಲ್ಲಿಯೇ ಉತ್ಪತ್ತಿಯಾಗುತ್ತದೆ. ಅರ್ಹ ವ್ಯಕ್ತಿಗಳು ರಕ್ತದಾನ ಮಾಡಲು ಮುಂದೆ ಬರಬೇಕು. ರಕ್ತದಾನದಿಂದ ದಾನಿಯ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ. ಬದಲಾಗಿ, ಅಗತ್ಯ ಆರೋಗ್ಯ ತಪಾಸಣೆಯ ಅರಿವು ಮೂಡುತ್ತದೆ ಎಂದು ತಿಳಿಸಿದರು.
ಶಿಬಿರದ ಉಸ್ತುವಾರಿ ನಾಗಭೂಷಣ್ ಮಾತನಾಡಿ, ಆರೋಗ್ಯವಂತ ವ್ಯಕ್ತಿಗಳು ವೈದ್ಯಕೀಯ ಮಾರ್ಗಸೂಚಿಗಳನ್ವಯ ರಕ್ತದಾನ ಮಾಡಬಹುದು. ನಿಯಮಿತ ರಕ್ತದಾನವು ಅಗತ್ಯವಿರುವವರಿಗೆ ಜೀವದಾನ ನೀಡುವ ಮಹತ್ವದ ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಮಾತನಾಡಿ, ಬದುಕಿನಲ್ಲಿ ಅತ್ಯಂತ ಶ್ರೇಷ್ಠ ದಾನಗಳಲ್ಲಿ ರಕ್ತದಾನವೂ ಒಂದು. ರಕ್ತದಾನದಿಂದ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಆಸರೆಯಾಗುವುದರ ಜೊತೆಗೆ, ಒಬ್ಬರ ಜೀವ ಉಳಿಸಿ ಇಡೀ ಕುಟುಂಬಕ್ಕೆ ಬೆಳಕಾಗಬಹುದು. ಆದ್ದರಿಂದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಸ್ಫೂರ್ತಿಯ ಲಯನ್ ನವನೀತ್ ಬಿ. ಆರ್., ಲಯನ್ ಜ್ಯೋತಿಚಂದ್ರ, ಲಯನ್ ಹರಿಣಿ ಎಂ. ಶೆಟ್ಟಿ, ಲಯನ್ ಜಗದೀಶ್ ಆಚಾರ್, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್., ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್, ಲಿಖಿತ ಜಿ. ಎನ್., ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ. ಭಾರತಿ ಪಿಲಾರ್ ಹಾಗೂ ವಿದ್ಯಾರ್ಥಿ ಸಂಘದ ಸಹ ನಿರ್ದೇಶಕ ಪ್ರೊ. ರಾಮಕೃಷ್ಣ ಬಿ. ಎಂ. ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.