‘ಮಂಗಳೂರು ದಸರಾ’ ಮಹೋತ್ಸವ ಸಂಪನ್ನ: ವೈಭವದ ಶೋಭಾಯಾತ್ರೆ ಲಕ್ಷಾಂತರ ಮಂದಿ ಭಾಗಿ
Wednesday, October 21, 2026
ಮಂಗಳೂರು: ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ‘ಮಂಗಳೂರು ದಸರಾ ವೈಭವದ ಶೋಭಾಯಾತ್ರೆಯೊಂದಿಗೆ ಬುಧವಾರ ಸಂಪನ್ನಗೊಂಡಿತು.
ಕುದ್ರೋಳಿ ದೇವಸ್ಥಾನದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನಡೆದ ವರ್ಣರಂಜಿತ ದಸರಾ ಮೆರವಣಿಗೆಯಲ್ಲಿ ದೇಶ, ವಿದೇಶಗಳಿಂದ ಆಗಮಿಸಿದ ಭಕ್ತ ಸಮೂಹ ಪಾಲ್ಗೊಂಡು ಕಣ್ತುಂಬಿಕೊಂಡಿತು.
ಶ್ರೀಕ್ಷೇತ್ರದಿಂದ ಸಂಜೆ ಮೊದಲು ಗಣಪತಿ ವಿಗ್ರಹದ ಬಳಿಕ ನವದುರ್ಗೆಯವರ ಅಲಂಕೃತ ವಿಗ್ರಹಗಳನ್ನು ಮಂಟಪದಿಂದ ಹೊರಗೆ ತರಲಾಯಿತು. ಕೊನೆಯಲ್ಲಿ ಶಾರದಾ ದೇವಿಯ ವಿಗ್ರಹವನ್ನು ವಿದ್ಯುದ್ದೀಪಾಲಂಕೃತ ರಥದಲ್ಲಿ ಕುಳ್ಳಿರಿಸಲಾಯಿತು. ವಿಗ್ರಹಗಳ ಶೋಭಾಯಾತ್ರೆ ಮುಂದುವರಿಯುತ್ತಿದ್ದಂತೆ ವಿವಿಧ ಬಗೆಯ ಟ್ಯಾಬ್ಲೋಗಳು, ಕೇರಳದ ಮೈನವಿರೇಳಿಸುವ ಚೆಂಡೆ ವಾದ್ಯ, ಬೆಂಗಳೂರಿನ ವಾದ್ಯ ತಂಡ, ರಾಜ್ಯದ ನಾನಾ ಕಡೆಯಿಂದ ಆಗಮಿಸಿದ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯ ನೃತ್ಯ ತಂಡಗಳು, ಮಹಾರಾಷ್ಟ್ರ ಕಲಾವಿದರ ಡೋಲ ನೃತ್ಯ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ, ತ್ರಿಶೂರಿನ ಬಣ್ಣದ ಕೊಡೆಗಳು, ಚಿತ್ತಾಕರ್ಷಕ ಹುಲಿವೇಷಗಳು, ವೈವಿಧ್ಯಮಯ ವಾದ್ಯ ವೃಂದಗಳು ಸೇರಿದಂತೆ ೫೦ಕ್ಕೂ ಅಧಿಕ ಟ್ಯಾಬ್ಲೋಗಳು, ಇಸ್ಕಾನ್ ಭಜನಾ ತಂಡ, ಹಳದಿ ವಸ್ತ್ರಧಾರಿ ತಂಡದಿಂದ ಕೇರಳ ಶಿವಗಿರಿ ತೀರ್ಥಾಟನೆ ದೃಶ್ಯ ಗಮನ ಸೆಳೆಯುತ್ತಿತ್ತು. ಆಧ್ಯಾತ್ಮಿಕ, ಸಾಂಸ್ಕೃತಿಕ, ಇತಿಹಾಸಗಳನ್ನು ಬಿಂಬಿಸುವ ಸ್ತಬ್ಧಚಿತ್ರದೊಂದಿಗೆ ಮಂಗಳೂರಿನ ರಾಜಬೀದಿಗಳಲ್ಲಿ ಮುನ್ನಡೆಯಿತು.
ಈ ಬಾರಿಯೂ ದಸರಾ ಮಹೋತ್ಸವಕ್ಕೆ ಇಡೀ ಮಂಗಳೂರು ಪ್ರಮುಖ ರಸ್ತೆಯನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಹೊಣೆಯನ್ನು ಮಹಾನಗರ ಪಾಲಿಕೆ ಆಡಳಿತ ವಹಿಸಿಕೊಂಡಿತ್ತು. ಇದಲ್ಲದೆ ಅನೇಕ ಸಂಘಸಂಸ್ಥೆಗಳು ಕೂಡ ನಗರವನ್ನು ಶೃಂಗರಿಸುವಲ್ಲಿ ಪೈಪೋಟಿಗೆ ಇಳಿದಿದ್ದವು. ಇದರಿಂದಾಗಿ ಇಡೀ ಮಂಗಳೂರು ಪೇಟೆಯಲ್ಲಿ ದಸರಾ ಹಬ್ಬದ ವಾತಾವರಣ ನವರಾತ್ರಿಯಲ್ಲಿ ಕಂಡುಬಂದಿತ್ತು.
ಅಪಾರ ಜನಸಾಗರ ನಡುವೆ ಶೋಭಾ ಯಾತ್ರೆಯು ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ನಾರಾಯಣ ಗುರು ವೃತ್ತ, ಲಾಲ್‌ಭಾಗ್, ಬಲ್ಲಾಲ್‌ಬಾಗ್, ಪಿವಿಎಸ್ ವೃತ್ತ, ನವಭಾರತ ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ, ಚಿತ್ರಾ, ಅಳಕೆಯಾಗಿ ಮರಳಿ ಕುದ್ರೋಳಿ ಕ್ಷೇತ್ರಕ್ಕೆ ಶುಕ್ರವಾರ ಬೆಳಗಿನ ಜಾವ ಆಗಮಿಸಿತು. ಬಳಿಕ ಪೂಜೆ ಬಲಿ, ಮಂಟಪ ಪೂಜೆ ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ಶ್ರೀ ಶಾರದೆ, ನವದುರ್ಗೆಯರ ಮೂರ್ತಿಗಳನ್ನು ಜಲಸ್ತಂಭನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಜೈರಾಜ್ ಹೆಚ್.ಸೋಮಸುಂದರಂ, ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ಸದಸ್ಯರಾದ ಹೆಚ್. ಎಸ್. ಸಾಯಿರಾಂ, ಸಂತೋಷ್ ಕುಮಾರ್ ಜೆ. ಜಗದೀಪ್ ಡಿ. ಸುವರ್ಣ, ಕೃತಿನ್ ಅಮೀನ್, ಕಿಶೋರ್ ದಂಡಕೇರಿ, ಕ್ಷೇತ್ರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ಡಾ. ಅನಸೂಯ ಬಿ.ಟಿ. ಸಾಲ್ಯಾನ್, ಡಾ. ಬಿ.ಜಿ. ಸುವರ್ಣ, ರಾಧಕೃಷ್ಣ, ಲೀಲಾಕ್ಷ ಕರ್ಕೇರಾ, ಚಿತ್ತರಂಜನ್ ಗರೋಡಿ, ಶೈಲೇಂದ್ರ ವೈ ಸುವರ್ಣ, ವಾಸುದೇವ ಕೋಟ್ಯಾನ್, ಎಚ್.ಎಸ್. ಜೈರಾಜ್, ಲತೀಶ್ ಎಂ. ಸುವರ್ಣ, ರಾಧಾಕೃಷ್ಣ, ಚಂದನ್‌ದಾಸ್, ಗೌರವಿ ರಾಜಶೇಖರ್, ಮತ್ತಿತರರು ಉಪಸ್ಥಿತರಿದ್ದರು.
ಜನಸ್ತೋಮ..:
ದಸರಾ ಮಹೋತ್ಸವಕ್ಕೆ ಆರಂಭದಿಂದಲೂ ಜನಸಾಗರ ಹರಿದುಬಂದಿದೆ. ನವರಾತ್ರಿಯ ಹತ್ತು ದಿನ ಕೂಡ ಭಕ್ತರು ಪ್ರವಾಹೋಪಾದಿಯಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ದಸರಾ ಮೆರವಣಿಗೆಗೆ ಬೆಳಗ್ಗಿನಿಂದಲೇ ಮಂಗಳೂರಿನತ್ತ ಜನತೆ ಆಗಮಿಸುವುದು ಕಂಡುಬಂತು. ಸಂಜೆಯಾಗುತ್ತಿದ್ದಂತೆ ಜನರು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿದ್ದರು. ಶೋಭಾಯಾತ್ರೆ ಸಾಗುವ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲಿನಿಂದ ಜನ ತಂಡವೇ ಮೇಳೈಸಿತ್ತು. ವರ್ಣಮಯ ಶೋಭಾಯಾತ್ರೆಯನ್ನು ಕಣ್ತುಂಬಿ ನೋಡುವುದರೊಂದಿಗೆ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿ ಸಂಭ್ರಮಿಸುತ್ತಿದ್ದರು.




