ಅಷ್ಟ ಭುಜೆಯಾದ ಆರ್ಷಿಯಾ ಖಾನ್
Thursday, October 22, 2026
ಮಂಗಳೂರು: ಕರಾವಳಿಯ ನೆಲ ಕೆಲವೊಮ್ಮೆ ಕೋಮು ದ್ವೇಷಕ್ಕೆ ಹೊತ್ತಿಕೊಳ್ಳುವುದುಂಟು. ಹಿಂದು- ಮುಸ್ಲಿಂ ಎನ್ನುವ ಕಾರಣಕ್ಕೆ ಅಮಾಯಕ ಜನರು ಕೊಲೆಯಾಗಿದ್ದು ಆ ಬಳಿಕ ಒಂದೆರಡು ತಿಂಗಳು ಬೂದಿ ಮುಚ್ಚಿದ ಕೆಂಡದಂತಾಗುವುದು ಮಾಮೂಲಿ ಅನ್ನುವ ಪರಿಸ್ಥಿತಿಯ ನಡುವೆಯೂ, ಧಾರ್ಮಿಕ ಸೌಹಾರ್ದ, ಧರ್ಮ ಭೇದ ಇಲ್ಲದೆ ಜನರು ಒಂದೆಡೆ ಕಲೆಯುವುದನ್ನೂ ನೋಡಿದ್ದೇವೆ. ಇಂತಹ ಊರಿನಲ್ಲಿ ಮುಸ್ಲಿಂ ಯುವತಿಯೊಬ್ಬಳು ಹಿಂದುಗಳು ಈ ಬ್ರಹ್ಮಾಂಡದ ಮೂಲಸ್ವರೂಪಿ, ಜಗನ್ಮಾತೆ ಎಂದು ಆರಾಧಿಸುವ ದೇವಿಯ ವೇಷ ಧರಿಸಿ ಯಕ್ಷ ಪ್ರಿಯರ ಮನ ಗೆದ್ದಿದ್ದಾರೆ.
ಮುಸ್ಲಿಂ ಯುವತಿ ಯಕ್ಷಗಾನದಲ್ಲಿ ದೇವಿ ಅವತಾರ ಎತ್ತಿದ್ದನ್ನು ಕಂಡು ಯಕ್ಷ ಅಭಿಮಾನಿಗಳು ಮುಕ್ತವಾಗಿ ಸ್ವಾಗತಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಒಕ್ಕೆತ್ತೂರು ಮಾಡ ನಿವಾಸಿ ತನು ವಿಟ್ಲ ಎಂದೇ ಪ್ರಸಿದ್ಧಿಯಾಗಿರುವ ಆರ್ಷಿಯಾ ಖಾನ್ ಎಂಬ ಯುವತಿ ಹಿಂದಿನಿಂದಲೂ ಯಕ್ಷಗಾನ ಕಲೆಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ನವರಾತ್ರಿ ಸಂಭ್ರಮದ ನಡುವೆ ಮಂಗಳೂರಿನ ಕದ್ರಿ ದೇವಸ್ಥಾನದ ಅಂಗಣದಲ್ಲಿ ಅ.20ರಂದು ನಡೆದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಆರ್ಷಿಯಾ ಇದೇ ಮೊದಲ ಬಾರಿಗೆ ದೇವಿ ಪಾತ್ರವನ್ನು ನಿರ್ವಹಿಸಿ ಜನ ಮನ ಗೆದ್ದಿದ್ದಾರೆ.