ಅಕ್ಷರ ದಾಸೋಹ ನೌಕರರ ಬಾಕಿ ಗೌರವಧನ ಪಾವತಿಗೆ ಆಗ್ರಹ
Monday, October 5, 2026
ಮಂಗಳೂರು: ಅಕ್ಷರ ದಾಸೋಹ ನೌಕರರಿಗೆ 2026ರ ಜೂನ್ ತಿಂಗಳಿಂದ ಬಾಕಿ ಇರುವ ಮಾಸಿಕ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಅಕ್ಷರ ದಾಸೋಹ ನೌಕರರು ಹಲವು ವರ್ಷಗಳಿಂದ ಕಡಿಮೆ ಗೌರವಧನದಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರ ಕೂಡಲೇ ಬಾಕಿ ಇರುವ ಗೌರವಧನವನ್ನು ಪಾವತಿಸಬೇಕು ಎಂದು ಒತ್ತಾಯಿಸಿದರು.
ಸೆ.೪ರಂದು ಬೆಂಗಳೂರಿನಲ್ಲಿ ನಡೆದ ಚಲೋ ಹೋರಾಟದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಬಾಕಿ ಇರುವ ಗೌರವಧನವನ್ನು ಶೀಘ್ರ ಪಾವತಿಸುವ ಭರವಸೆ ನೀಡಿದ್ದರು. ಆದರೆ ಈವರೆಗೆ ಹಣ ಪಾವತಿಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಕ್ಷರ ದಾಸೋಹ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಬಬಿತಾ, ವಿದ್ಯಾ, ರತ್ನಮಾಲಾ, ಉಮಾವತಿ, ರೇವಾಲತಾ, ಆಶಾ, ಅನಿತಾ, ವಸಂತಿ, ಲತಿಕಾ, ಶೈಲಾ ಸೇರಿದಂತೆ ಹಲವು ನೌಕರರು ಭಾಗವಹಿಸಿದ್ದರು.