ಎಂಆರ್‌ಪಿಎಲ್ ದ್ವಿತೀಯ ಹಂತದ ಕಾರ್ಮಿಕರಿಗೆ ಆರೋಗ್ಯ ವಿಮೆ: ಬಿಎಂಎಸ್ ಹಾಗೂ ಇತರ ಕಾರ್ಮಿಕ ಸಂಘಟನೆಗಳ ಬೇಡಿಕೆಗೆ ಮಹತ್ವದ ಸ್ಪಂದನೆ
ಈ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಂಆರ್‌ಪಿಎಲ್ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವಿಮಾ ಸೌಲಭ್ಯ ಕಲ್ಪಿಸುವ ಬೇಡಿಕೆಯ ಕುರಿತು ಈಗಾಗಲೇ ಒಎನ್‌ಜಿಸಿ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಮುಂದಿನ ಒಂದು ತಿಂಗಳೊಳಗೆ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಎಂಆರ್‌ಪಿಎಲ್ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಆರೋಗ್ಯ ವಿಮೆ ಅತ್ಯಂತ ಅಗತ್ಯವಾಗಿದ್ದು, ಈ ಬೇಡಿಕೆಯನ್ನು ಬಿಎಂಎಸ್ ಹಾಗೂ ಇತರ ಕಾರ್ಮಿಕ ಸಂಘಟನೆಗಳು ಹಲವು ಸಂದರ್ಭಗಳಲ್ಲಿ ಆಡಳಿತದ ಮುಂದೆ ಪ್ರಸ್ತಾಪಿಸುತ್ತಾ ಬಂದಿವೆ. ಶಾಸಕ ಉಮಾನಾಥ ಕೊಟ್ಯಾನ್ ಅವರ ಸಮ್ಮುಖದಲ್ಲಿಯೂ ಈ ಬೇಡಿಕೆಯನ್ನು ಮಂಡಿಸಲಾಗಿತ್ತು.
ಇದು ಆಡಳಿತಾತ್ಮಕವಾಗಿ ಮಹತ್ವದ ನಿರ್ಧಾರವಾಗಿದ್ದು, ಒಎನ್‌ಜಿಸಿ ಬೋರ್ಡ್‌ನ ಅನುಮೋದನೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಒಎನ್‌ಜಿಸಿ ಅಧ್ಯಕ್ಷ ಅರುಣ್ ಕುಮಾರ್ ಸಿಂಗ್ ಅವರೊಂದಿಗೆ ಚರ್ಚಿಸಲಾಗಿದ್ದು, ಮುಂದಿನ ಒಂದು ತಿಂಗಳೊಳಗೆ ಆರೋಗ್ಯ ವಿಮೆ ಕುರಿತು ಘೋಷಣೆ ಮಾಡುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.
1.20 ಕೋಟಿ ಪರಿಹಾರ-ಕಾರ್ಮಿಕರ ಹೋರಾಟಕ್ಕೆ ಸ್ಪಂದನೆ:
ಇತ್ತೀಚೆಗೆ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕ ಮನೀಷ್ ಶರ್ಮಾ ಅವರ ಕುಟುಂಬಕ್ಕೆ 1.20 ಕೋಟಿ ರೂ. ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಲಾಗಿದೆ. ಮೃತ ಕಾರ್ಮಿಕರ ಕುಟುಂಬಕ್ಕೆ ನೀಡಿದ್ದ ಭರವಸೆಯಂತೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪೆಟ್ರೋಲಿಯಂ ಸಚಿವಾಲಯದ ಮೂಲಕ ಒಖPಐ ಆಡಳಿತಕ್ಕೆ ಸೂಕ್ತ ನಿರ್ದೇಶನ ನೀಡಲು ಶ್ರಮಿಸಿದ ಕೇಂದ್ರ ಪೆಟ್ರೋಲಿಯಂ ಸಚಿವರು, ಸಚಿವಾಲಯದ ಅಧಿಕಾರಿಗಳು ಹಾಗೂ ಒಖPಐ ಆಡಳಿತಕ್ಕೆ ಬಿಎಂಎಸ್ ಕೃತಜ್ಞತೆ ಸಲ್ಲಿಸಿದೆ.
ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗಾಗಿ ಬಿಎಂಎಸ್ ಹಾಗೂ ಇತರ ಕಾರ್ಮಿಕ ಸಂಘಟನೆಗಳು ನಡೆಸಿದ ನಿರಂತರ ಹೋರಾಟಕ್ಕೆ ದೊರೆತ ಈ ಸ್ಪಂದನೆಯನ್ನು ಬಿಎಂಎಸ್ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಆರೋಗ್ಯ ವಿಮಾ ಸೌಲಭ್ಯವು ಕೇವಲ ಭರವಸೆಯಾಗಿ ಉಳಿಯದೆ, ನಿಗದಿತ ಅವಧಿಯಲ್ಲಿ ಅಧಿಕೃತವಾಗಿ ಜಾರಿಗೆ ಬರಬೇಕು ಎಂಬುದು ಬಿಎಂಎಸ್‌ನ ಸ್ಪಷ್ಟ ನಿಲುವಾಗಿದೆ. ಎಂಆರ್‌ಪಿಎಲ್‌ನಲ್ಲಿ ಕಾರ್ಯನಿರ್ವಹಿಸುವ ದ್ವಿತೀಯ ಹಂತದ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸಮರ್ಪಕ ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ದೊರೆಯುವವರೆಗೆ ಬಿಎಂಎಸ್ ಈ ವಿಚಾರವನ್ನು ಜವಾಬ್ದಾರಿಯುತವಾಗಿ ಮುಂದುವರಿಸಿಕೊಂಡು ಹೋಗಲಿದೆ ಎಂದು ಅನಿಲ್ ಕುಮಾರ್ ಯು. ತಿಳಿಸಿದ್ದಾರೆ.