ಪಿಜಿ, ಹಾಸ್ಟೆಲ್, ಹೋಟೆಲ್ ತಪಾಸಣೆ: ಕ್ಯೂಆರ್ ಕೋಡ್ ಜಾರಿ
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೀಮಿತ ಸಿಬ್ಬಂದಿಯ ನಡುವೆಯೂ ತಪಾಸಣೆ ಚುರುಕುಗೊಳಿಸಲು ಪ್ರತಿ ತಾಲೂಕಿನಲ್ಲಿ 60 ವರ್ಷ ಮೇಲ್ಪಟ್ಟ ನಿವೃತ್ತ ಹಿರಿಯರನ್ನು ಒಳಗೊಂಡ ಪರಿಶೀಲನಾ ತಂಡ ರಚಿಸುವ ಕುರಿತು ಚಿಂತನೆ ನಡೆದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಆಹಾರ ನೀಡುವುದು ಪಿಜಿ ಹಾಗೂ ಹಾಸ್ಟೆಲ್ ಮಾಲೀಕರ ಸಾಮಾಜಿಕ ಜವಾಬ್ದಾರಿಯಾಗಿದ್ದು, ಕೇವಲ ಲಾಭದ ಉದ್ದೇಶಕ್ಕೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಬಾರದು ಎಂದು ಸಚಿವರು ಎಚ್ಚರಿಸಿದರು.
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 10 ವೈಲ್ಸ್, ತಾಲೂಕು ಮಟ್ಟದಲ್ಲಿ 30 ವೈಲ್ಸ್ ಹಾಗೂ ಜಿಲ್ಲಾ ಗೋದಾಮುಗಳಲ್ಲಿ ಅಗತ್ಯವಿರುವಷ್ಟು ಹಾವು ಕಡಿತ ನಿಗ್ರಹ ಇಂಜೆಕ್ಷನ್‌ಗಳನ್ನು ದಾಸ್ತಾನು ಇರಿಸಲಾಗಿದ್ದು, ಯಾವುದೇ ಕೊರತೆಯಿಲ್ಲ. 108 ಆಂಬುಲೆನ್ಸ್ಗಳಲ್ಲಿ ಹಾವು ಕಡಿತದ ಔಷಧಗಳನ್ನು ಇರಿಸಲು ಕೋಲ್ಡ್ ಸ್ಟೋರೇಜ್ (ಶೀತಲೀಕರಣ) ವ್ಯವಸ್ಥೆ ಅಗತ್ಯವಿದ್ದು, ಮುಂದಿನ ಒಂದು-ಎರಡು ತಿಂಗಳಲ್ಲಿ ಆಂಬ್ಯುಲೆನ್ಸ್ ಸೇವೆಗೆ ಹೊಸ ವ್ಯವಸ್ಥೆ ತರಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಚಿಂತನ ಸಭೆ..
ಆಹಾರ ಮತ್ತು ಔಷಧ ಗುಣಮಟ್ಟ ಸುಧಾರಣೆ ಹಾಗೂ ರಾಜ್ಯ-ಕೇಂದ್ರ ಸರ್ಕಾರಗಳ ಜವಾಬ್ದಾರಿಯನ್ನು ನಿರ್ದಿಷ್ಟಪಡಿಸುವ ನಿಟ್ಟಿನಲ್ಲಿ ನವೆಂಬರ್ 15ರಂದು ಬೆಂಗಳೂರಿನಲ್ಲಿ ವಿವಿಧ ರಾಜ್ಯಗಳ ಆಹಾರ ಮತ್ತು ಔಷಧ ಇಲಾಖೆಗಳ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ರಾಷ್ಟ್ರಮಟ್ಟದ ಮಹತ್ವದ ಚಿಂತನ ಸಭೆಯನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.