ಪುತ್ತೂರು ಶಾಸಕ ಅಶೋಕ ರೈ ನಿಂದನೆ ಬಿಟ್ಟು ಆರೋಪಗಳಿಗೆ ಉತ್ತರಿಸಲಿ: ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್
ಮಂಗಳೂರು: ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿರುವ ಬಿಜೆಪಿ ನಾಯಕರ ವಿರುದ್ಧ ಹಗುರವಾಗಿ ಮಾತನಾಡುವ ಬದಲು, ಪುತ್ತೂರು ಶಾಸಕ ಅಶೋಕ ರೈ ಅವರು ತಮ್ಮ ಪಕ್ಷದೊಳಗಿನಿಂದಲೇ ಕೇಳಿಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
‘ಸ್ವಪಕ್ಷೇ ದ್ರೋಹ ಚಿಂತನಂ’ ಎಂಬ ಮಾತಿಗೆ ತಕ್ಕಂತೆ ಕಾಂಗ್ರೆಸ್ನೊಳಗೆ ಪರಸ್ಪರ ಆರೋಪಗಳು ಕೇಳಿಬರುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ತಮ್ಮದೇ ಪಕ್ಷದ ಕೆಲವರ ಕೈವಾಡವಿದೆ ಎಂದು ಸಚಿವ ಯತೀಂದ್ರ ಅವರೇ ಆರೋಪಿಸಿದ್ದಾರೆ. ಇಂತಹ ಗಂಭೀರ ಆರೋಪಗಳಿಗೆ ಸ್ಪಷ್ಟನೆ ನೀಡದೆ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಗುರಿಯಾಗಿಸುವುದು ಮೂಲ ವಿಷಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ.
ಸ್ಟಿಂಗ್ ಆಪರೇಷನ್ಗಳ ಕುರಿತು ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳನ್ನು ನಿವಾರಿಸಲು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬುದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಕುಂಪಲ ಅವರ ಸ್ಪಷ್ಟ ಆಗ್ರಹವಾಗಿದೆ. ಪ್ರಕರಣದ ಸತ್ಯಾಂಶವನ್ನು ತಿಳಿಯುವ ಹಕ್ಕು ಸಾರ್ವಜನಿಕರಿಗಿದೆ. ಅದನ್ನು ಜನರ ಮುಂದಿಡುವ ಹೊಣೆಗಾರಿಕೆ ಸರಕಾರಕ್ಕಿದ್ದು, ವೈಯಕ್ತಿಕ ನಿಂದನೆಯ ಮೂಲಕ ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಯಾರ ಪಾತ್ರವಿದೆ, ಯಾರ ಪಾತ್ರವಿಲ್ಲ ಎಂಬುದು ತನಿಖೆಯಿಂದ ನಿರ್ಧಾರವಾಗಲಿ. ಆರೋಪಗಳು ಸುಳ್ಳಾಗಿದ್ದರೆ ಅದೂ ಬಹಿರಂಗವಾಗಲಿ. ಆದರೆ ತನಿಖೆಗೆ ಆಗ್ರಹಿಸಿದವರ ವಿರುದ್ಧ ಕಿಡಿಕಾರುವುದರಿಂದ ಸಾರ್ವಜನಿಕರ ಅನುಮಾನಗಳು ನಿವಾರಣೆಯಾಗುವುದಿಲ್ಲ. ಪ್ರಶ್ನಿಸಿದವರನ್ನು ನಿಂದಿಸಿದ ಮಾತ್ರಕ್ಕೆ ಪ್ರಶ್ನೆಗಳು ಅಳಿಸಿಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಹಾಗೂ ಕಾಂಗ್ರೆಸ್ನೊಳಗಿನ ಅಧಿಕಾರದ ಪೈಪೋಟಿಯ ಬಗ್ಗೆ ಅಶೋಕ ರೈ ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಜನರು ನೀಡಿರುವುದು ಜನಸೇವೆಯ ಅವಕಾಶವೇ ಹೊರತು ರಾಜಕೀಯ ಎದುರಾಳಿಗಳನ್ನು ನಿಂದಿಸುವ ಪರವಾನಗಿ ಅಲ್ಲ. ಶಾಸಕರ ಸ್ಥಾನದ ಘನತೆ ಉಳಿಯುವುದು ಸಂಯಮದ ಮಾತು ಮತ್ತು ಜನಪರ ಕೆಲಸಗಳಿಂದಲೇ ಹೊರತು ಬೆದರಿಕೆಯ ದಾಟಿಯ ವೀಡಿಯೊ ಸಂದೇಶಗಳಿಂದಲ್ಲಾ ಎಂದು ಹೇಳಿದ್ದಾರೆ.
ಸಾರ್ವಜನಿಕ ಹಿತದ ಪ್ರಶ್ನೆಗಳನ್ನು ಎತ್ತುವುದನ್ನು ಬಿಜೆಪಿ ಮುಂದುವರಿಸಲಿದೆ. ಅಶೋಕ ರೈ ಅವರು ತಮ್ಮ ಅಧಿಕಾರಾವಧಿಯ ಉಳಿದ ಸಮಯವನ್ನು ಪುತ್ತೂರಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ವಿನಿಯೋಗಿಸಲಿ. ವೈಯಕ್ತಿಕ ನಿಂದನೆಗೆ ವಿರಾಮ ನೀಡಿ, ನಿಷ್ಪಕ್ಷಪಾತ ತನಿಖೆಯನ್ನು ಬೆಂಬಲಿಸಲಿ ಎಂದು ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.