ಸಾರಿಗೆ ಉದ್ಯಮಿ ನಾರಾಯಣ ಪಿ.ಎಂ. ಸಿರಿಪುರ ಪ್ರಶಸ್ತಿ-2026ಕ್ಕೆ ಆಯ್ಕೆ: ಡಾ.ಶಿರೂರು
ಮೂಡುಬಿದಿರೆಯ ಪೊನ್ನೆಚಾರಿ ಲಕ್ಷ್ಮಿ ವೆಂಕಟರಮಣ ದೇವಾಲಯದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ 17ರಂದು ನಡೆಯುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ನಾರಾಯಣ ಪಿ.ಎಂ. ಅವರು ಮೂಡುಬಿದಿರೆಯ ಮಾಸ್ತಿಕಟ್ಟೆಯವರಾಗಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡಿರುವ ಇವರು ಬಿ.ಎಸ್ ಸಿ. ಪದವೀಧರರಾಗಿರುತ್ತಾರೆ.
1978 ರಿಂದ 1990ರ ವರೆಗೆ ತಮ್ಮ ಹಿರಿಯ ಸಹೋದರರಾದ ಶೀನಪ್ಪ ಅವರ ನಾರಾಯಣ ಸಾ- ಮಿಲ್ಲ್ ನಲ್ಲಿ ಕರ್ತವ್ಯ ನಿರ್ವಹಿಸಿ ವ್ಯವಹಾರದ ಅನುಭವವನ್ನು ಪಡೆದುಕೊಂಡರು. ನಂತರ ಸ್ವತಂತ್ರ ಉದ್ಯಮವನ್ನು ನಡೆಸುವ ಉದ್ದೇಶದಿಂದ ನಿಶ್ಮಿತಾ ಟ್ರಾವೆಲ್ಸ್, ನಿಶ್ಮಿತಾ ಟವರ್, ಸುಗಮ ಟೂರಿಸ್ಟ್ ಮತ್ತು ಹೋಟೆಲ್ ಉದ್ಯಮದ ಮೂಲಕ ಜನಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜನಸೇವೆಯ ಜೊತೆಯಲ್ಲಿ ಸಮಾಜ ಸೇವೆಯನ್ನು ಮಾಡುವ ಹಂಬಲವನ್ನು ಹೊಂದಿರುವ ಇವರು ರೋಟರಿ ಕ್ಲಬ್ ನಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ, ಸಕ್ರಿಯ ಕಾರ್ಯಕರ್ತರಾಗಿ ನಿರಂತರವಾಗಿ ಅದರಲ್ಲಿ ತೊಡಗಿಸಿಕೊಂಡು ಬಂದವರು.
ರೋಟರಿ ಸಂಸ್ಥೆಯ ಮೂಲಕ ರೋಟರಿ ಎಜುಕೇಶನ್ ಸೊಸೈಟಿ ಎಂಬ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಮಾಜಿ ಸಚಿವರಾದ ದಿವಂಗತ ಕೆ. ಅಮರನಾಥ ಶೆಟ್ಟಿ ಅವರ ಕನಸನ್ನು ನನಸು ಮಾಡುವಲ್ಲಿ, ರೋಟರಿ ವಿದ್ಯಾ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಾರಾಯಣ ಪಿ.ಎಂ. ಅವರ ಶ್ರಮ ಅಪಾರವಾದುದು.
ಇಂದೂ ರೋಟರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ ಆ ಸಂಸ್ಥೆಯ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದ್ದಾರೆ.
ಧಾರ್ಮಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಕಳೆದ 35 ವರ್ಷಗಳಿಂದ ಸಕ್ರಿಯವಾಗಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಣೇಶೋತ್ಸವ ಕಾರ್ಯಕಾರಿ ಸಮಿತಿಯಲ್ಲಿ ವಿವಿಧ ಹುದ್ದೆಗಳನ್ನು ಶ್ರದ್ಧೆಯಿಂದ ನಿರ್ವಹಿಸಿ, ಪ್ರಸ್ತುತ ಸಮಿತಿಯ ಅಧ್ಯಕ್ಷರಾಗಿ ವ್ಯವಸ್ಥಿತವಾಗಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದಾರೆ.
ಕಳೆದ 35 ವರ್ಷಗಳಿಂದ ಮೂಡುಬಿದಿರೆ ಯ ಜನತೆಗೆ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ವಿಶಾಲವಾದ ಸಭಾಂಗಣಗಳನ್ನು ನಿರ್ಮಿಸುವುದರ ಮೂಲಕ ಜನರ ಸುಂದರ ಬದುಕಿಗೆ ಉತ್ತಮ ಸಹಕಾರ ನೀಡುತ್ತಾ ಬಂದಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಇವರ ಸಾಧನೆಗಳನ್ನು ಪರಿಗಣಿಸಿ ವಿವಿಧ ಸಂಘ-ಸಂಸ್ಥೆಗಳು ಹತ್ತು ಹಲವು ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಾಧನೆಯನ್ನು ಪರಿಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮೂಡುಬಿದಿರೆ ಕೋ ಆಪರೇಟಿವ್ ಬ್ಯಾಂಕ್ ಸಮಗ್ರ ಸಾಧಕ ಪ್ರಶಸ್ತಿ, ಮೂಡುಬಿದಿರೆ ಸಮಾಜ ಮಂದಿರ ಸಭಾ ಸಮಾಜ ಮಂದಿರ ಪುರಸ್ಕಾರ ನೀಡಿ ಗೌರವಿಸಿದೆ.