ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಪರೀಕ್ಷಾ ಶುಲ್ಕವನ್ನು ದುಪ್ಪಟ್ಟು: ಎಂಎಲ್ ಸಿ ಬೋಜೇಗೌಡ ಆಕ್ಷೇಪ
ಮೂಡುಬಿದಿರೆಯಲ್ಲಿ ಪತ್ರಕತ೯ರೊಂದಿಗೆ ಮಾತನಾಡಿದ ಅವರು ಪರೀಕ್ಷಾ ಶುಲ್ಕವನ್ನು ಏರಿಕೆ ಮಾಡುವುದು ಸರಿಯಲ್ಲ. ಪರೀಕ್ಷಾ ಶುಲ್ಕವನ್ನು ದುಪ್ಪಟ್ಟು ಮಾಡುವಷ್ಟು ಸರಕಾರ ದಿವಾಳಿಯಾಗಿದೆಯೇ ಎಂದು ಪ್ರಶ್ನಿಸಿದರು.
ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ಶೈಕ್ಷಣಿಕ ವರ್ಷದ ಅರ್ಧದಲ್ಲಿ ಶುಲ್ಕ ಹೆಚ್ಚಳದ ನಿರ್ಧಾರ ಕೈಗೊಳ್ಳುವುದು ಉತ್ತಮ ಬೆಳವಣಿಗೆಯಲ್ಲ. ಶುಲ್ಕ ಹೆಚ್ಚಿಸುವುದಾದರೆ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಮಾಹಿತಿ ನೀಡಿ, ಅದಕ್ಕೆ ಅನುಗುಣವಾಗಿ ಶುಲ್ಕ ನಿಗದಿಪಡಿಸಬೇಕು ಎಂದರು.
ಪುಸ್ತಕ, ಶೂ ಪೂರೈಕೆಯಲ್ಲೂ ಅವ್ಯವಸ್ಥೆ
ಸರಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುತ್ತಿರುವ ಶೂ ಹಾಗೂ ಸಾಕ್ಸ್ ಕಳಪೆ ಗುಣಮಟ್ಟದ್ದಾಗಿವೆ ಇದರಲ್ಲೂ ಗೋಲ್ ಮಾಲ್ ನಡೆದಿದೆ ಎಂದು ಬೋಜೇಗೌಡ ಆರೋಪಿಸಿದರು.
ಮಕ್ಕಳಿಂದ ಈಗಾಗಲೇ ಹಣ ಸಂಗ್ರಹಿಸಲಾಗಿದ್ದರೂ, ಪೂರ್ಣ ಪ್ರಮಾಣದ ಪಠ್ಯಪುಸ್ತಕಗಳು ಇನ್ನೂ ವಿತರಣೆಗೊಂಡಿಲ್ಲ. ಪುಸ್ತಕ ಹಾಗೂ ಶೂ ಪೂರೈಕೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅತಿಥಿ ಶಿಕ್ಷಕರಿಗೆ ವೇತನ ವಿಳಂಬ
ಅತಿಥಿ ಶಿಕ್ಷಕರಿಗೆ ನಾಲ್ಕೈದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಇಲಾಖೆಯಲ್ಲಿ ಹಲವು ಸಮಸ್ಯೆಗಳು ಉಂಟಾಗಿವೆ ಎಂದು ಅವರು ಆರೋಪಿಸಿದರು.
ಪ್ರಮೋಷನ್ ವಿಚಾರದಲ್ಲಿಯೂ ಗೊಂದಲ ಸೃಷ್ಟಿಯಾಗಿದೆ. ಎಸ್ಸೆಸ್ಸೆಲ್ಸಿ ಹಂತದಿಂದ ಪಿಯುಸಿ ಉಪನ್ಯಾಸಕರ ಹುದ್ದೆಗೆ ನೇಮಕಾತಿ ಅಥವಾ ಬಡ್ತಿ ನೀಡುವಾಗ ಖಾಲಿ ಹುದ್ದೆಗಳನ್ನು ಸ್ಪಷ್ಟವಾಗಿ ತೋರಿಸಬೇಕು. ಆದರೆ ಇದೀಗ ಎಲ್ಲ ಹುದ್ದೆಗಳನ್ನು ಮಿಶ್ರಗೊಳಿಸಲಾಗುತ್ತಿರುವುದರಿಂದ ಸಮಸ್ಯೆ ಎದುರಾಗುತ್ತಿದೆ ಎಂದರು.
ದಸರಾ ರಜೆಯನ್ನು ಪ್ರಾಂಶುಪಾಲರಿಗೂ ಅನ್ವಯಿಸಬೇಕು. ರಜಾ ಅವಧಿಯಲ್ಲಿ ಅವರಿಗೆ ಯಾವುದೇ ತರಬೇತಿ ನೀಡಬಾರದು. ಪ್ರಾಂಶುಪಾಲರಿಗೂ ಕುಟುಂಬ, ಸಂಸಾರ ಹಾಗೂ ಮಕ್ಕಳಿದ್ದಾರೆ. ಯಾವುದೇ ನಿರ್ಧಾರ ಕೈಗೊಳ್ಳುವಾಗ ಸರಕಾರ ಈ ಅಂಶಗಳನ್ನು ಪರಿಗಣಿಸಬೇಕು. ಪ್ರಾಂಶುಪಾಲರಿಗೆ ರಜೆ ನಿರಾಕರಿಸುವ ಸಂಬಂಧದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಬೋಜೇಗೌಡ ಆಗ್ರಹಿಸಿದರು.