ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆ ಎದುರಿಸಲು ಮಾರ್ಗದರ್ಶನ ಕಾರ್ಯಾಗಾರ
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಸ್.ಡಿ.ಎಂ. ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನು ಎ.ಆರ್. ಮಾತನಾಡಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪ್ರತಿದಿನ ಅಧ್ಯಯನಕ್ಕೆ ನಿರ್ದಿಷ್ಟ ಸಮಯ ಮೀಸಲಿಡುವುದು, ಅಣಕು ಪರೀಕ್ಷೆಗಳನ್ನು ಬರೆಯುವುದು ಹಾಗೂ ಪ್ರಶ್ನೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದರು. ವಿಶೇಷವಾಗಿ, ಸುಲಭವಾಗಿ ಅಂಕ ಗಳಿಸಬಹುದಾದ ಪ್ರಶ್ನೆಗಳನ್ನು ಗುರುತಿಸಿ, ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಪರೀಕ್ಷೆಯಲ್ಲಿನ ಸಾಧನೆಯನ್ನು ಸುಧಾರಿಸಬಹುದು ಎಂದು ವಿವರಿಸಿದರು.
ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಲ್ಲಿ ಬರುವ ಬೋಧನಾ ಸಾಮರ್ಥ್ಯ, ಸಂಶೋಧನಾ ಸಾಮರ್ಥ್ಯ, ತಾರ್ಕಿಕ ಚಿಂತನೆ, ದತ್ತಾಂಶ ವ್ಯಾಖ್ಯಾನ, ಉನ್ನತ ಶಿಕ್ಷಣ ವ್ಯವಸ್ಥೆ ಹಾಗೂ ಪರಿಸರ ಸಂಬಂಧಿತ ವಿಷಯಗಳ ಪ್ರಶ್ನೆಗಳನ್ನು ಹೇಗೆ ಅರ್ಥೈಸಿ ಉತ್ತರಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ ಟಿ.ಕೆ. ರವೀಂದ್ರನ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರಥ್ವಿ ಸ್ವಾಗತಿಸಿ, ಭವ್ಯಾ ಕಾರ‍್ಯಕ್ರಮ ನಿರೂಪಿಸಿ, ಕ್ಷಮಾ ವಂದಿಸಿದರು.