ಕ್ರೀಡೆ ಮತ್ತು ಶಿಕ್ಷಣಕ್ಕೆ ಎಕ್ಸಲೆಂಟ್ ಸಮಾನ ಮಹತ್ವ ನೀಡುತ್ತಿದೆ: ಎಸ್.ಎಲ್. ಭೋಜೇಗೌಡ

ಕ್ರೀಡೆ ಮತ್ತು ಶಿಕ್ಷಣಕ್ಕೆ ಎಕ್ಸಲೆಂಟ್ ಸಮಾನ ಮಹತ್ವ ನೀಡುತ್ತಿದೆ: ಎಸ್.ಎಲ್. ಭೋಜೇಗೌಡ


ಮೂಡುಬಿದಿರೆ: ಕ್ರೀಡೆಯು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವುದರ ಜೊತೆಗೆ ಆತ್ಮವಿಶ್ವಾಸ, ಶಿಸ್ತು ಮತ್ತು ತಂಡದ ಮನೋಭಾವವನ್ನು ಬೆಳೆಸುತ್ತದೆ. ಕ್ರೀಡೆ ಮತ್ತು ಶಿಕ್ಷಣಕ್ಕೆ ಎಕ್ಸಲೆಂಟ್ ಸಂಸ್ಥೆಯು ಸಮಾನ ಅವಕಾಶವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ ಹೇಳಿದರು. 


ಅವರು ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನ ಎಕ್ಸಲೆಂಟ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೈಸೂರು ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 

ದೈಹಿಕ ಶಿಕ್ಷಣ ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿ ಇಡುತ್ತದೆ. ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಇದೆ. ಇಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅದೆಷ್ಟೋ ದೈಹಿಕ ಶಿಕ್ಷಕರಿಗೆ ಅವಕಾಶ ಕೊಟ್ಟಿದೆ. ಪ್ರತಿಭೆ ಯಾರೊಬ್ಬರ ಸೊತ್ತಲ್ಲ ಅದು ಪ್ರತಿಯೊಬ್ಬರಲ್ಲಿ ಸುಪ್ತವಾಗಿರುವ ಅಂಶ. ಕ್ರೀಡೆಯಲ್ಲಿ ವಿಜಯಿಯಾಗುವುದು ಎಂದರೆ ಸಪ್ತ ಸಾಗರ ದಾಟಿ ಬಂದಂತೆ. ಅಲ್ಲಿರುವ ಸವಾಲುಗಳು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಜಕ್ಕೂ ಅಪರಿಮಿತ. ಸಾಧನೆಯ ಹಠ ಮತ್ತು ಛಲ ಆ ಸಪ್ತ ಸಾಗರದ ಅರ್ಥಾತ್ ಸವಾಲುಗಳನ್ನು ಈಜಿಸಿ ದಡ ಮುಟ್ಟಿಸುತ್ತದೆ ಎಂದು ಹೇಳಿದರು.

ಮಂಗಳೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ ಜಿ.ಎಸ್. ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದಷ್ಟೇ ಕ್ರೀಡೆಯೂ ಮಹತ್ವದ್ದಾಗಿದೆ. ಸರ್ಕಾರ, ಶಿಕ್ಷಣ ಮತ್ತು ಕ್ರೀಡೆ ಎರಡಕ್ಕೂ ಸಮಾನ ಆದ್ಯತೆ ನೀಡುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಮಾತನಾಡಿ, ಒತ್ತಡದ ಪರಿಸ್ಥಿತಿಯಲ್ಲೂ ಆಟವನ್ನು ಸಂಯಮ ಕಳೆದುಕೊಳ್ಳದೆ ಆಡುವವನೇ ನಿಜವಾದ ಆಟಗಾರ ಎಂದ ಅವರು ಇಲಾಖೆಯ ಅಧಿಕಾರಿಗಳು, ದೈಹಿಕ ಶಿಕ್ಷಕರುಗಳ ಮತ್ತು ಸಂಸ್ಥೆಯ ದೈಹಿಕ ಶಿಕ್ಷಕರುಗಳ ಬದ್ಧತೆಯಿಂದ ಈ ಕ್ರಿಕೆಟ್ ಪಂದ್ಯಕೂಟ ಯಶಸ್ಸು ಕಂಡಿದೆ. ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಪಂದ್ಯಕೂಟ ಮಾಡಲು ಮನವಿ ಬಂದ ಹಿನ್ನೆಲೆಯಲ್ಲಿ ಸಂಸ್ಥೆ ಸರ್ವ ವಿಧದ ನೆರವು ನೀಡಲು ಬಯಸುತ್ತದೆ ಎಂದರು.

ಹಾಸನಕ್ಕೆ ಚಾಂಪಿಯನ್ ಪಟ್ಟ:

ಬಹು ನಿರೀಕ್ಷೆ ಮೂಡಿಸಿದ್ದ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹಾಸನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಂಡ್ಯ ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು. ಹಾಸನ ತಂಡದ ಚಂದನ್ ಅವರು ಪಂದ್ಯಾವಳಿಯ ಅತ್ಯುತ್ತಮ ಪ್ರದರ್ಶನಕ್ಕಾಗಿ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ರಿತೇಶ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ನಾಗೇಶ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್, ವಿನ್ನಿ ಫ್ರೆಡ್ ಪಿಂಟೋ, ಸಕಲೇಶಪುರದ ದೈಹಿಕ ಶಿಕ್ಷಣಾಧಿಕಾರಿ ನವೀನ್ ಪುತ್ತ್ರನ್, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯಶಿಕ್ಷಕ ಶಿವಪ್ರಸಾದ್ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿ ಮೌಲ್ಯ ವೈ.ಆರ್.ಜೈನ್ ಉಪಸ್ಥಿತರಿದ್ದರು.

ಉಪ ಮುಖ್ಯ ಶಿಕ್ಷಕ ಜಯಶೀಲ ಸ್ವಾಗತಿಸಿದರು. ಶಿಕ್ಷಕ ರೇಣುಕಾಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


17 ವರ್ಷ ವಯೋಮಿತಿ ಒಳಗಿನ ಬಾಲಕಿಯರ ವಿಭಾಗದಲ್ಲಿ ಉಡುಪಿ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ,ಕೊಡಗು ದ್ವಿತೀಯ ಸ್ಥಾನ ಪಡೆಯಿತು. ಉಡುಪಿ ತಂಡದ ರೇಚಲ್ ಮೆಂಡೋನ್ಸಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅದೇ ರೀತಿ 14 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಉಡುಪಿ ತಂಡ ಪ್ರಥಮ ಹಾಗೂ ಹಾಗೂ ಚಿಕ್ಕಮಂಗಳೂರು ದ್ವಿತೀಯ ಸ್ಥಾನ ಪಡೆಯಿತು. ಉಡುಪಿಯ ವೈಭವ್ ಎಸ್ ಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಂಬಂಧಗಳ ನಿರ್ದೇಶಕರು ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ನ ರೊಟೇರಿಯನ್ ಅಬ್ದುಲ್ ರೆಹಮಾನ್, ರೋಟರಿಯ ಅಸಿಸ್ಟೆಂಟ್ ಗವರ್ನರ್ ಸಿ ಎ ಉಮೇಶ್ ರಾವ್ ಹಾಗೂ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಪ್ರತಿಭಾನ್ವಿತ ಹಳೆಯ ವಿದ್ಯಾರ್ಥಿನಿ ಮೌಲ್ಯ ವೈ ಆರ್ ಜೈನ್ ಬಹುಮಾನ ವಿತರಿಸಿ ವಿಜೇತ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article