ಸೈಬರ್ ವಂಚಕರಿಂದ 1.31 ಕೋಟಿ ಪಂಗನಾಮ: ಆರೆಸ್ಟ್ ಭಯಕ್ಕೆ ಹಣ ಕಳೆದುಕೊಂಡ ಪುತ್ತೂರಿನ ವ್ಯಕ್ತಿ

ಸೈಬರ್ ವಂಚಕರಿಂದ 1.31 ಕೋಟಿ ಪಂಗನಾಮ: ಆರೆಸ್ಟ್ ಭಯಕ್ಕೆ ಹಣ ಕಳೆದುಕೊಂಡ ಪುತ್ತೂರಿನ ವ್ಯಕ್ತಿ

ಪುತ್ತೂರು: ಹಣವಂತರನ್ನು ಭಯದಲ್ಲಿ ಬೀಳಿಸಿ ಹಣ ವರ್ಗಾವಣೆ ಮಾಡಿಸಿಕೊಳ್ಳುವ ಜಾಲ ಸಕ್ರೀಯವಾಗಿದ್ದು, ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಂದ 1.31 ಕೋಟಿ ರೂ. ವಂಚಿಸಿ ಪಂಗನಾಮ ಹಾಕಿದ ಘಟನೆ ನಡೆದಿದೆ. 

ಪುತ್ತೂರು ತಾಲೂಕಿನ ಬಡಗನ್ನೂರು ಗಾಮದ ನೆಕ್ಕರೆ ನಿವಾಸಿ ಮನಮೋಹನ್ ರಾವ್ ಎಂಬವರು ಈ ಡಿಜಿಟಲ್ ಆರೆಸ್ಟ್‌ಗೆ ಭಯ ಬಿದ್ದು ಕೋಟ್ಯಾಂತರ ರೂ ಕಳೆದುಕೊಂಡಿದ್ದಾರೆ. 

ಹಣವಂತರನ್ನು ಟಾರ್ಗೆಟ್ ಮಾಡುವ ಈ ವಂಚಕರು ನಾನಾ ಬಗೆಯ ಮೋಸದ ಜಾಲಗಳನ್ನು ಹೆಣೆದು ವ್ಯಕ್ತಿಗಳನ್ನು ಭಯ ಬೀಳಿಸಿ ಹಣ ಕೀಳುವ ತಂತ್ರಗಾರಿಕೆ ನಡೆಸುತ್ತಿದ್ದಾರೆ. 

ಇದೀಗ ಈ ಪ್ರಕರಣದಲ್ಲಿಯೂ ಡಿಜಿಟಲ್ ಆರೆಸ್ಟ್ ಎಂಬ ಭಯ ಬಿತ್ತಿ ಅವರ ಕೈಯಿಂದಲೇ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಸೈಬರ್ ವಂಚಕರ ವಿರುದ್ಧ ಮಂಗಳೂರಿನ ಸಿಸಿಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಮುಂಬೈ ಪೊಲೀಸ್ ಹಾಗೂ ಎಟಿಎಸ್  ಅಧಿಕಾರಿಗಳೆಂದು ತಮ್ಮನ್ನು ತಾವು  ಬಿಂಬಿಸಿಕೊಂಡು ಫೋನ್ ಮಾಡಿದ ವ್ಯಕ್ತಿಗಳು ಈ ವ್ಯಕ್ತಿಯನ್ನು ಬೆದರಿಸಿ ಬಲೆಗೆ ಬೀಳಿಸಿದ್ದಾರೆ.

ಅಪರಿಚಿತರು ದೂರುದಾರರನ್ನು ಸಂಪರ್ಕಿಸಿ, ತಾವು ಮುಂಬೈ ಪೊಲೀಸ್ ಮತ್ತು ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ನಿಮ್ಮ ಬ್ಯಾಂಕ್ ಖಾತೆಯಿಂದ ಪೆಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆಯಾಗಿದೆ. ನಿಮ್ಮ ಮೇಲೆ ಕೇಸು ದಾಖಲಾಗಿದೆ. ನೀವು ಡಿಜಿಟಲ್ ಎರೆಸ್ಟ್ ಆಗಿದ್ದೀರಿ ಎಂದು ಆರೋಪ ಮಾಡಿದ್ದಾರೆ. ನಿಮ್ಮನ್ನು ತಕ್ಷಣ ಆರೆಸ್ಟ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. 

ಬಳಿಕ  ಆರೋಪಿಗಳು ವಾಟ್ಸಾಪ್ ವೀಡಿಯೋ ಕರೆಗಳ ಮೂಲಕ ದೂರುದಾರರನ್ನು ನಿರಂತರವಾಗಿ ಸಂಪರ್ಕಿಸಿ  ಸುಳ್ಳು ತನಿಖೆಯ ನಾಟಕವಾಡಿದ್ದಾರೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣ ಮಾಡುವಂತೆ ಅಭಿನಯಿಸಿದ್ದಾರೆ. ಪ್ರಕರಣದಿಂದ ಪಾರಾಗಬೇಕಾದರೆ ನಾವು ಸೂಚಿಸುವ ಖಾತೆಗಳಿಗೆ ಹಣ ವರ್ಗಾಯಿಸಬೇಕೆಂದು ಸೂಚಿಸಿದ್ದಾರೆ.

ಇದನ್ನು ನಿಜವೆಂದು ನಂಬಿದ ದೂರುದಾರರು ಸೆ.2ರಿಂದ ಅಕ್ಟೋಬರ್ 6 ರವರೆಗೆ ಹಂತ-ಹಂತವಾಗಿ ಆರ್.ಟಿ.ಜಿ.ಎಸ್. ಮೂಲಕ ಒಟ್ಟು 1,31,50,000 ಹಣವನ್ನು ವಂಚಕರು ನೀಡಿದ ನಾನಾ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಅಂತಿಮವಾಗಿ  ತಾನು ಮೋಸ ಹೋಗಿರುವುದನ್ನು ಅರಿತ ಸಂತ್ರಸ್ತರು  ಸೈಬರ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ. ಈ ದೂರಿನನ್ವಯ ದಕ್ಷಿಣ ಕನ್ನಡ ಸಿ.ಸಿ.ಪಿ.ಎಸ್ ಠಾಣೆಯಲ್ಲಿ ಐಟಿ ಕಾಯ್ದೆ ಹಾಗೂ ಬಿ.ಎನ್.ಎಸ್  ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ಸೈಬರ್ ಅಪರಾಧಿಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಹಣ ದೋಚಲು ’ಡಿಜಿಟಲ್ ಎರೆಸ್ಟ್’ ಎಂಬ ಹೊಸ ತಂತ್ರ ಬಳಸುತ್ತಿದ್ದಾರೆ. ಆದರೆ ಡಿಜಿಟಲ್ ಅರೆಸ್ಟ್ ಎಂಬ ಕಾನೂನು ಜಾರಿಯಲ್ಲೇ ಇಲ್ಲ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ. ಕಾನೂನು ಜಾರಿ ಸಂಸ್ಥೆಗಳಾದ ಪೊಲೀಸ್, ಸಿಬಿಐ, ಇಡಿ, ಐಟಿ ಅಥವಾ ಎಟಿಎಸ್ ನಂಥ ಸಂಸ್ಥೆಗಳು ಯಾವುದೇ ವ್ಯಕ್ತಿಯನ್ನು ವೀಡಿಯೋ ಕರೆಗಳ ಮೂಲಕ ತನಿಖೆ ನಡೆಸುವುದಿಲ್ಲ ಅಥವಾ ’ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ ಎಂಬುದನ್ನು ಜನ ತಿಳಿದುಕೊಳ್ಳಬೇಕಿದೆ. ಇಂಥ ಕರೆಗಳಿಗೆ ಬೆದರಿ ಹಣ ವರ್ಗಾವಣೆ ಮಾಡಬಾರದು ಮತ್ತು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಕಳೆದ ವರ್ಷ ಪುತ್ತೂರಿನಲ್ಲಿ ವೈದ್ಯರೊಬ್ಬರಿಗೆ ಇದೇ ರೀತಿ ಡಿಜಿಟಲ್ ಎರೆಸ್ಟ್ ಭಯ ಮೂಡಿಸಿ 16 ಲಕ್ಷ ರೂ. ದೋಚಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article