ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ. ಜಿಲ್ಲೆ ನಂಬರ್ ಒನ್: ಸೀತಾರಾಮ ರೈ ಸವಣೂರು

ಸಹಕಾರಿ ಕ್ಷೇತ್ರದಲ್ಲಿ ಅವಿಭಜಿತ ದ.ಕ. ಜಿಲ್ಲೆ ನಂಬರ್ ಒನ್: ಸೀತಾರಾಮ ರೈ ಸವಣೂರು

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟುಗೆ ಸನ್ಮಾನ


ಪುತ್ತೂರು: ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಸಾಕಷ್ಟು ಮಂದಿ ತಮ್ಮ ಬೆವರು ಸುರಿಸಿದ್ದಾರೆ. ಉತ್ತಮ ಸಹಕಾರಿ ಸಂಸ್ಥೆಗಳನ್ನು ನಿರ್ಮಿಸಿ ಯಶಸ್ಸು ಸಾಧಿಸಿದ್ದಾರೆ. ಅಂತಹ ಒಂದು ಸಂಸ್ಥೆಯಾಗಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಸ್ಥೆ ಪ್ರಸ್ತುತ ವಾರ್ಷಿಕವಾಗಿ ರೂ. 2.50 ಕೋಟಿ ಲಾಭ ಗಳಿಸಿದೆ. ಇದು ಆದರ್ಶದಿಂದಲೇ ಕಟ್ಟಲಾದ ಸಂಸ್ಥೆಯಾಗಿದೆ. ಸಹಕಾರಿ ಸಂಘಗಳ ಪರಿಶ್ರಮದಿಂದಲೇ ಅವಿಭಜಿತ ದಕ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ ಎಂದು ಕೆ. ಸೀತಾರಾಮ ರೈ ಸವಣೂರು ಹೇಳಿದರು.

ಪುತ್ತೂರಿನ ದರ್ಬೆಯ ಪ್ರಶಾಂತ್ ಮಹಲ್ ಸಭಾಂಗಣದಲ್ಲಿ ನಡೆದ ರಾಜ್ಯ ಸಹಕಾರ ಮಹಾಮಂಡಳಕ್ಕೆ ಜಿಲ್ಲೆಯಿಂದ ಆಯ್ಕೆಯಾದ ಶಶಿಕುಮಾರ್ ಬಾಲ್ಯೊಟ್ಟು ಅವರಿಗೆ ಏರ್ಪಡಿಸಲಾದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. 

ಸಹಕಾರ ಮನೋಭಾವ ಕೇವಲ ಆರ್ಥಿಕವಾಗಿ ಇದ್ದರೆ ಸಾಲದು ಕೌಟುಂಬಿಕ ಮತ್ತು ಸಾಮಾಜಿಕ ಬದುಕಿನಲ್ಲಿಯೂ ಬೇಕು. ಆಗ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ತಂದೆ-ತಾಯಿಯನ್ನು ದೇವರೆಂದು ಪೂಜಿಸುವ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಅಗತ್ಯ ಇದೆ. ಹಿರಿಯರಿಗೆ ಗೌರವ ಕೊಡುವ ಪರಂಪರೆಯನ್ನು ನಾವು ಉಳಿಸಬೇಕಾಗಿದೆ. ಹಿರಿಯರನ್ನು ಗೌರವಿಸದವರು ಯಾವುದೇ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸೀತಾರಾಮ ರೈ ಅವರದ್ದು ‘ಪೊಲ್ಸುದ ಕೈ’

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ಬಾಲ್ಯೊಟ್ಟು ಅವರು, ಸಹಕಾರಿ ಕ್ಷೇತ್ರವನ್ನು ಬೆಳೆಸಿದ ಸಾಧಕ. ಅಷ್ಟೇ ಅಲ್ಲ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನನ್ನು ತಾನು ತೊಡಗಿಸಿಕೊಂಡು ಅದರಲ್ಲಿ ಅಭಿವೃದ್ಧಿಯ ಚಿಂತನೆ ಮಾಡಿದವರು. ಅವರು ಕೈಹಾಕಿದ ಕ್ಷೇತ್ರದಲ್ಲಿ ಯಾವತ್ತೂ ವೈಫಲ್ಯ ಅನುಭವಿಸಿಲ್ಲ. ಹಾಗಾಗಿ ಸೀತಾರಾಮ ರೈ ಅವರ ಕೈ ಪೊಲ್ಸುದ ಕೈ ಎಂದು ನಾವೆಲ್ಲಾ ಹೇಳುತ್ತೇವೆ. ಅತ್ಯಂತ ಶ್ರಮಜೀವಿಯಾದ ರೈಗಳು ನಾನು ಸಹಕಾರಿ ಕ್ಷೇತ್ರಕ್ಕೆ ಬರಲು ಅವರ ಮಾರ್ಗದರ್ಶನವೇ ಕಾರಣ ಎಂದರು.

ರಾಜ್ಯ ಮಹಾಮಂಡಳದಲ್ಲಿ ನಿರ್ದೇಶಕರಾಗಲು ಈ ತನಕ 14 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾರಿಗೂ ಅವಕಾಶ ಸಿಕ್ಕಿರಲಿಲ್ಲ. ಆದರೆ ನನಗೆ ಅವಿರೋಧವಾಗಿ ಆಯ್ಕೆಯಾಗುವ ಭಾಗ್ಯ ಸಿಕ್ಕಿದೆ. ರಾಜ್ಯದ ಮುಖ್ಯಮಂತ್ರಿ ಅವರ ಮನೆಯಲ್ಲಿಯೇ ಈ ಆಯ್ಕೆ ನಡೆಸಲಾಯಿತು. ಪ್ರತಿಯೊಂದು ಸಹಕಾರಿ ಸಂಸ್ಥೆಯೂ ಲಾಭದಾಯಕವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ಅತ್ಯಂತ ನಿಸ್ವಾರ್ಥದಿಂದ ನಾನು ಸೇವೆ ನೀಡುವ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಅವರು ಮಾತನಾಡಿ, ಕುಗ್ರಾಮವಾಗಿದ್ದ ಸವಣೂರನ್ನು ರಾಜ್ಯವೇ ಗುರುತಿಸುವಂತೆ ಮಾಡಿದ ವ್ಯಕ್ತಿ-ಶಕ್ತಿ ಸೀತಾರಾಮ ರೈ ಅವರಾಗಿದ್ದಾರೆ. ಸಹಕಾರಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆಗೆ ಬೇರೆ ಹೋಲಿಕೆ ಇಲ್ಲ. ತಾನು ಬೆಳೆದಂತೆ ಮತ್ತೊಬ್ಬರನ್ನೂ ಬೆಳೆಸುವ ಪ್ರೋತ್ಸಾಹಕಾರಿ ಮನೋಭಾವ ಹೊಂದಿರುವ ಸೀತಾರಾಮ ರೈ ಜನತೆಯ ಪಾಲಿನ ಶಕ್ತಿಯಾಗಿದ್ದಾರೆ. ಶಶಿಕುಮಾರ್ ಬಾಲ್ಯೊಟ್ಟು ಅವರು ಕೂಡಾ ಕಠಿಣ ಪರಿಶ್ರಮಿ. ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದವರು. ಸಹಕಾರಿ ಕ್ಷೇತ್ರ ಬಾಲ್ಯೊಟ್ಟು ಅವರಿಂದ ಇನ್ನಷ್ಟು ಬಯಸುತ್ತದೆ. ಆ ಅವಕಾಶವೂ ಅವರಿಗೆ ದೊರೆತಿದೆ. ಅವರು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆ ಎಂದು ಹೇಳಿದರು. 

ವೇದಿಕೆಯಲ್ಲಿ ರಾಮಕೃಷ್ಣ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಮತ್ತು ಆದರ್ಶ ವಿವಿಧೋದ್ದೇಶ ಸಹಕಾರಿಸಂಘದ ನಿರ್ದೇಶಕರಾದ ಚಿಕ್ಕಪ್ಪ ನಾಕ್, ಆದರ್ಶ ವಿವಿಧೋದ್ದೇಶ ಸಹಕಾರಿಸಂಘದ ಉಪಾಧ್ಯಕ್ಷ ಸುಂದರ್ ರೈ ಸವಣೂರು ಉಪಸ್ಥಿತರಿದ್ದರು. ಶಶಿಕುಮಾರ್ ಬಾಲ್ಯೊಟ್ಟು ಅವರನ್ನು ಸಹಕಾರರತ್ನ ಕೆ.ಸೀತಾರಾಮ ರೈ ಅವರು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶಮಿತಾ ಪ್ರಾರ್ಥಿಸಿದರು. ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಸಂಘದ ಮಹಾಪ್ರಬಂಧಕ ವಸಂತ ಜಾಲಾಡಿ ಅವರು ಶಶಿಕುಮಾರ್ ಪರಿಚಯ ಭಾಷಣ ಮಾಡಿದರು. ಪಾಂಡೇಶ್ವರ ಶಾಖೆಯ ವ್ಯವಸ್ಥಾಪಕಿ ಮಹಾಲಕ್ಷ್ಮಿ ಸನ್ಮಾನ ಪತ್ರ ವಾಚಿಸಿದರು. ಸಹಾಯಕ ಮಹಾಪ್ರಬಂಧಕ ಸುನಾದ್ ರಾಜ್ ಶೆಟ್ಟಿ ವಂದಿಸಿದರು. ಸವಣೂರು ಶಾಖೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article