ಸಂತ ಫಿಲೋಮಿನಾ ಕಾಲೇಜಿನಲ್ಲಿ ಚಿಗುರು ಹಸ್ತಪತ್ರಿಕೆ ಬಿಡುಗಡೆ
Saturday, October 24, 2026
ಪುತ್ತೂರು: ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ‘ಸ್ಪಂದನ’ ಸಭಾಂಗಣದಲ್ಲಿ ದ್ವಿತೀಯ ಬಿಎಸ್ಸಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ‘ಚಿಗುರು’ ಹಸ್ತಪತ್ರಿಕೆಯ ಬಿಡುಗಡೆ ಸಮಾರಂಭವು ಜರುಗಿತು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ‘ಚಿಗುರು’ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಅರಳುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ದೊರಕಿದ ಒಂದು ಸುಂದರ ವೇದಿಕೆ ‘ಚಿಗುರು’ ಹಸ್ತಪತ್ರಿಕೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ್ ಮೊಳೆಯಾರ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದ ಜೊತೆಗೆ ಇಂತಹ ಪಠ್ಯಪೂರಕ ಚಟುವಟಿಕೆಗಳು ಸಹಕಾರಿ ಎಂದರು.
‘ಚಿಗುರು’ ಹಸ್ತಪತ್ರಿಕೆಯ ಸಂಪಾದಕಿ, ದ್ವಿತೀಯ ಬಿಎಸ್ಸಿ ವಿದ್ಯಾರ್ಥಿನಿ ಶ್ರೀವಿದ್ಯಾ ಎನ್. ಸ್ವಾಗತಿಸಿ, ಉಪಸಂಪಾದಕಿ ಅಪರ್ಣಾ ಎಸ್. ವಂದಿಸಿದರು. ಕದೀಜತ್ ಝಕಿಯ್ಯ ಕಾರ್ಯಕ್ರಮ ನಿರೂಪಿಸಿದರು.
