ಸಂತ ಫಿಲೋಮಿನಾ ಕಾಲೇಜಿನ ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳಿಂದ ಪೊಲೀಸ್ ಠಾಣಾ ಅಧ್ಯಯನ
ಪೊಲೀಸ್ ತನಿಖಾಧಿಕಾರಿಗಳು, ಕಾನೂನು ನೆರವು ಸಂಸ್ಥೆಗಳು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರ ನಡುವಿನ ಸಮನ್ವಯವು ಸಂತ್ರಸ್ತರಿಗೆ ಮಾನಸಿಕ-ಸಾಮಾಜಿಕ ನೆರವು, ಪುನರ್ವಸತಿ ಹಾಗೂ ಸಂತ್ರಸ್ತಕೇಂದ್ರಿತ ಸಹಾಯ ಒದಗಿಸುವಲ್ಲಿ ಮಹತ್ವದ್ದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದರು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ವಿಧಾನ, ಠಾಣೆಯ ಅಪರಾಧ ದಾಖಲೆಗಳ ನಿರ್ವಹಣೆ, ತನಿಖಾ ಪ್ರಕ್ರಿಯೆಗಳು, ಮುನ್ನೆಚ್ಚರಿಕಾ ಪೊಲೀಸ್ ಕ್ರಮಗಳು ಹಾಗೂ ಲಾಕ್‌ಅಪ್ ನಿರ್ವಹಣೆ ಕುರಿತು ನೇರವಾಗಿ ತಿಳಿದುಕೊಂಡರು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಮಾನದಂಡಗಳನ್ನು ಪಾಲಿಸುವ ಅಗತ್ಯಕ್ಕೂ ಒತ್ತು ನೀಡಲಾಯಿತು.
ಬಳಿಕ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿರ್ವಹಣೆ, ಸಂಚಾರ ನಿಯಂತ್ರಣ, ಅಪಘಾತ ತಡೆಗಟ್ಟುವ ಕ್ರಮಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಈ ಅಧ್ಯಯನ ಭೇಟಿಯು ತರಗತಿಯಲ್ಲಿನ ಸೈದ್ಧಾಂತಿಕ ಜ್ಞಾನವನ್ನು ಕ್ಷೇತ್ರಮಟ್ಟದ ವಾಸ್ತವಿಕ ಅನುಭವದೊಂದಿಗೆ ಬೆಸೆಯಲು ವಿದ್ಯಾರ್ಥಿಗಳಿಗೆ ನೆರವಾಯಿತು. ವಿಧಿವಿಜ್ಞಾನ ಸಮಾಜಕಾರ್ಯ, ಸಮುದಾಯ ಅಭಿವೃದ್ಧಿ ಹಾಗೂ ಸಂತ್ರಸ್ತರ ಪರ ವಕಾಲತ್ತು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ಅಂತರ-ಸಂಸ್ಥಾ ಸಮನ್ವಯದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಂಡರು. ಎಂಎಸ್‌ಡಬ್ಲ್ಯು ವಿಭಾಗದ ಅಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಉಪಸ್ಥಿತರಿದ್ದರು.

