ಸರಕಾರಿ ಜಮೀನಿನಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿ
ಶಿರ್ವ: ಕಾಪು ತಾಲ್ಲೂಕು ಕಟ್ಟಿಂಗೇರಿ ಗ್ರಾಮದ ಕೇನೆಕುಂಜದ ಸ.ನಂ. 105ರಲ್ಲಿ ಸರಕಾರಿ ಜಮೀನಿನಲ್ಲಿ ವಾರಾಹಿ ನದಿಯ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಜಲಜೀವನ್ ಮಿಷನ್‌ನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸರಕಾರಿ ಜಾಗದಲ್ಲಿ ಕಾಮಗಾರಿ ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಅನಾವಶ್ಯಕ ತೊಂದರೆಯಾಗುತ್ತಿದೆ.
ಈ ಬೃಹತ್ ಯೋಜನೆಯ ಬೃಹತ್ ಮೊತ್ತದ ಸಾರ್ವಜನಿಕ ಹಣ [ಪೈಪ್‌ಲೈನ್‌ಗಾಗಿ] ವ್ಯಯವಾಗಿದ್ದು, ಈ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗದಿದ್ದಲ್ಲಿ ಇಡೀ ಯೋಜನೆಯೇ ವ್ಯರ್ಥವಾಗಲಿದೆ. ಇದರಿಂದ ಬೆಳ್ಳೆ-ಕಟ್ಟಂಗೇರಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಲಿದೆ.
ಅರಣ್ಯ ಇಲಾಖೆಯು ಈ ಟ್ಯಾಂಕ್ ನಿರ್ಮಾಣದ ಸ್ಥಳವು ಸರಕಾರಿ ಜಮೀನಾಗಿದ್ದರೂ ಹಾಗೂ ಕಾಮಗಾರಿಗಾಗಿ ಯಾವುದೇ ಮರವನ್ನು ಕಡಿಯುವ ಅಗತ್ಯ ಇಲ್ಲದೇ ಇರುವ ಸಂದರ್ಭದಲ್ಲಿಯೂ ಸದ್ರಿ ಕಾಮಗಾರಿಯನ್ನು ನಿರ್ವಹಿಸಲು ಅಡೆತಡೆಯನ್ನು ಉಂಟು ಮಾಡುತ್ತಿರುವುದು, ಸದ್ರಿ ಯೋಜನೆ ನಿಷ್ಫಲವಾಗಿ ನೀರಿನ ಸಂಕಷ್ಟ ಉಂಟಾಗುವ ಆತಂಕ ಎದುರಾಗಿರುತ್ತದೆ.
ಬರದ ಛಾಯೆ ಇರುವ ಈ ಕಠಿಣ ಸಂದರ್ಭದಲ್ಲಿ ಸರ್ಕಾರ ಈಗಾಗಲೇ ಬ್ರಹ್ಮಾವರ, ಉಡುಪಿ ತಾಲ್ಲೂಕುಗಳನ್ನು ಬರದ ಪಟ್ಟಿಗೆ ಸೇರಿಸಿರುವುದು ಗಮನಾರ್ಹ.
ಜಿಲ್ಲಾಧಿಕಾರಿಗಳು ಈ ಪರಿಸ್ಥಿತಿಯ ತುರ್ತನ್ನು ಅರಿತುಕೊಂಡು, ಅರಣ್ಯ ಇಲಾಖೆಯು ತಿಂಗಳುಗಳಿಂದ ಈ ಬಗ್ಗೆ ತಾಳುತ್ತಿರುವ ವಿಳಂಬ ಧೋರಣೆಯ ಬಗ್ಗೆ ಪರಿಶೀಲಿಸಿ, ಕಂದಾಯ ಇಲಾಖೆ ಅಧಿಕಾರಿಗಳ ಸ್ಥಳ ಪರಿಶೀಲನಾ ವರದಿಯನ್ನು ಪಡೆದುಕೊಂಡು ಕೂಡಲೇ ಕಾಮಗಾರಿಯನ್ನು ಆರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕಾಗಿ ನಾಗರಿಕ ಸಮಿತಿ ಮೂಡುಬೆಳ್ಳೆ ಪರವಾಗಿ ಅಧ್ಯಕ್ಷ ಸುಧಾಕರ ಪೂಜಾರಿ ಆಗ್ರಹಿಸಿದ್ದಾರೆ.
ನಾಳೆ ಸಾಂಕೇತಿಕ ಪ್ರತಿಭಟನೆ:
ಅರಣ್ಯ ಇಲಾಖೆಯ ಅಡ್ಡಿಯಿಂದ ಟ್ಯಾಂಕ್ ನಿರ್ಮಾಣ ಆರಂಭಗೊಳ್ಳದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಆತಂಕ ಎದುರಾಗಿದ್ದು ಗ್ರಾಮಸ್ಥರು ಕೇನೆಕುಂಜ ಪರಿಸರದಲ್ಲಿ ಅ. 5ರಂದು ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.