ಸೇವೆಯ ಸಾಧನೆಗೆ ಪ್ರಕಾಶ್ ಶೆಟ್ಟಿ ಪಿಡಿಒ ಗಳಿಗೆ ಮಾದರಿ: ಡಾ. ಕೆ.ಎನ್. ವಿಜಯಪ್ರಕಾಶ
ಉಜಿರೆ: ಸರ್ಕಾರಿ ಅಧಿಕಾರಿಗಳಿಗೆ ನಾಲ್ಕು ಗೋಡೆಗಳ ನಡುವೆ ಸಣ್ಣ ಪ್ರಮಾಣದಲ್ಲಿ ಬೀಳ್ಕೊಡುಗೆ ನಡೆಯುತ್ತದೆ. ಆದರೆ ನೊಚ್ಚ ಪ್ರಕಾಶ್ ಶೆಟ್ಟಿ ಅವರಿಗೆ ಭವ್ಯ ವೇದಿಕೆಯಲ್ಲಿ ನಡೆದಿರುವ ಅಭಿವಂದನಾ ಕಾರ್ಯಕ್ರಮವು ಅವರ ಸೇವಾ ಸಾಧನೆಗೆ ಸಾಕ್ಷಿಯಾಗಿದೆ. ಅವರ ಸೇವಾ ಕಾರ್ಯ ರಾಜ್ಯದ ಇತರೆಲ್ಲ ಪಿಡಿಒಗಳಿಗೆ ಮಾದರಿಯಾಗಿದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ ಹೇಳಿದರು.
ಅವರು ಉಜಿರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೊಚ್ಚ ಪ್ರಕಾಶ್ ಶೆಟ್ಟಿ ಅವರಿಗೆ ಉಜಿರೆ ನಾಗರಿಕರು ಹಾಗೂ ನೊಚ್ಚ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ವತಿಯಿಂದ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ "ಪ್ರಕಾಶಾಭಿವಂದನಮ್’" ಕಾರ್ಯಕ್ರಮದಲ್ಲಿ ಪ್ರಕಾಶ ಪರ್ವ ಅಭಿನಂದನಾ ಕೃತಿ ಬಿಡುಗಡೆಗೊಳಿಸಿ ಅಭಿನಂದಿಸಿ ದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿನಂದನಾ ನುಡಿಗಳನ್ನಾಡಿ ತಮಗೆ ಉಪಕಾರ ಮಾಡಿದವರನ್ನು ಸ್ಮರಿಸುವ ಕಾರ್ಯವನ್ನು ಉಜಿರೆ ನಾಗರಿಕರು ಮಾಡಿದ್ದಾರೆ. ಪ್ರಕಾಶ್ ಶೆಟ್ಟಿ ಅವರ ಸಾಧನೆ ಯುವಜನತೆಗೆ ಸ್ಫೂರ್ತಿಯಾಗಿದೆ. ಕೆಲಸದಲ್ಲಿ ಅಚ್ಚುಕಟ್ಟುತನ, ಶಿಸ್ತು ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಅವರು ಗ್ರಾಮದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನೊಚ್ಚ ಪ್ರಕಾಶ್ ಶೆಟ್ಟಿ, ಜನರು ನೀಡಿದ ಗೌರವದಿಂದ ಮನಸ್ಸು ತುಂಬಿ ಬಂದಿದೆ. ಜೀವನ ಸಾರ್ಥಕವೆನಿಸುತ್ತಿದೆ. ತಮ್ಮ ಸಾಧನೆಯ ಹಿಂದೆ ಹಿರಿಯರ ಆಶೀರ್ವಾದ, ಕುಟುಂಬದ ಸಹಕಾರ, ಹಿರಿಯ ಅಧಿಕಾರಿಗಳ,ಸಿಬಂದಿಗಳ ಪರಿಶ್ರಮದ ಬೆಂಬಲವಿದೆ. ತಮಗೆ ನೀಡಿದ ಸನ್ಮಾನವನ್ನು ತಮ್ಮೊಂದಿಗೆ ಕಾರ್ಯನಿರ್ವಹಿಸಿದ ಸಿಬಂದಿಗಳಿಗೆ ಅರ್ಪಿಸುವುದಾಗಿ ಧನ್ಯಭಾವ ವ್ಯ ಕ್ತಪಡಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿನುತಾ ರಜತ್ ಗೌಡ ನೇತೃತ್ವದಲ್ಲಿ ‘"ಪ್ರಕಾಶ ಪರ್ವ "ಅಭಿನಂದನಾ ಕೃತಿ ಬಿಡುಗಡೆಗೊಳಿಸಲಾಯಿತು. ನೊಚ್ಚ ಪ್ರಕಾಶ್ ಶೆಟ್ಟಿ ಹಾಗೂ ಪತ್ನಿ ಪ್ರವೀಣ ದಂಪತಿಯನ್ನು ಸನ್ಮಾನಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಕಾಶ್ ಶೆಟ್ಟಿ ಅವರ ಸೇವಾ ಬದುಕಿನ ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.ಸುಭಾಷಿಣಿ ರಚಿತಾ ಅಭಿನಂದನಾ ಗೀತೆಯನ್ನು ಸುನಿಲ್ ದೇವಾಡಿಗ ರಾಗಸಂಯೋಜಿಸಿ ಹಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಉಜಿರೆ ಗ್ರಾ.ಪಂ. ಆಡಳಿತಾಧಿಕಾರಿ ಮಹಾವೀರ ಸೇಬಣ್ಣವರ , ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರ ಪ್ರಸಾದ್ ಬಿ.ಎಸ್. ಉಪಸ್ಥಿತರಿದ್ದರು.ನೊಚ್ಚ ಪ್ರಕಾಶ್ ಶೆಟ್ಟಿ ಅಭಿವಂದನ ಸಮಿತಿ ಸಂಚಾಲಕ ರಘುರಾಮ ಶೆಟ್ಟಿ ಸ್ವಾಗತಿಸಿದರು. ಬಿ. ರವೀಂದ್ರ ಶೆಟ್ಟಿ ಸುರಭಿ ಸನ್ಮಾನ ಪತ್ರ ವಾಚಿಸಿ, ಬಿ. ಸೋಮಶೇಖರ ಶೆಟ್ಟಿ ನಿರೂಪಿಸಿ, ಪ್ರಸಾದ್ ಬಿ ಎಸ್ ವಂದಿಸಿದರು. ಕೆ.ಮೋಹನ್ ಕುಮಾರ್ ಸಹಕರಿಸಿದ್ದರು.