ನಿವೃತ್ತ ಪ್ರಾಂಶುಪಾಲ ಎನ್.ಜೆ. ಕಡಂಬ ನಿಧನಕ್ಕೆ ಹೆಗ್ಗಡೆ ಸಂತಾಪ
ಉಜಿರೆ: ಹಿರಿಯ ವಕೀಲರೂ, ದಕ್ಷ ಆಡಳಿತದಾರರೂ, ಸಮಾಜಸೇವಕರೂ ಆಗಿದ್ದ ನಿವೃತ್ತ ಪ್ರಾಂಶುಪಾಲ ವೇಣೂರು ಕುಕ್ಕೇಡಿಗುತ್ತು ಎನ್.ಜೆ. ಕಡಂಬರು ನಿಧನರಾದ ಸುದ್ಧಿ ತಿಳಿದು ವಿಷಾದವಾಯಿತು.
ಅನೇಕ ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ ವಕೀಲರಾಗಿದ್ದ ಅವರು ನಮ್ಮ ಎಸ್.ಡಿ.ಎಂ. ಎಜುಕೇಶನಲ್ ಟ್ರಸ್ಟ್ನ ಆಡಳಿತಮಂಡಳಿ ಸದಸ್ಯರಾಗಿ, ವೇಣೂರು ದಿಗಂಬರ ಜೈನತೀರ್ಥಕ್ಷೇತ್ರ ಸಮಿತಿಯ ಸಕ್ರಿಯ ಸದಸ್ಯರಾಗಿ, ಬೆಳ್ತಂಗಡಿ ರೋಟರಿ ಕ್ಲಬ್‌ನ ಸ್ಥಾಪಕಾಧ್ಯಕ್ಷರಾಗಿ ಹಾಗೂ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮಂಗಳೂರಿನಲ್ಲಿ ನಾವು ಎಸ್.ಡಿ.ಎಂ. ಕಾನೂನು ಕಾಲೇಜನ್ನು ಪ್ರಾರಂಭಿಸಿದಾಗ ಅದರ ಸ್ಥಾಪಕ ಪ್ರಾಂಶುಪಾಲರಾಗಿ ದಕ್ಷ ಆಡಳಿತದಾರರಾಗಿ, ಶಿಸ್ತಿನಸಿಪಾಯಿಯಾಗಿ ಸಂಸ್ಥೆಯ ಪ್ರಗತಿಗೆ ಭದ್ರ ಬುನಾದಿಯನ್ನು ಹಾಕಿ ಸಹಕರಿಸಿದರು. ಅವರ ಅನೇಕ ಹಿರಿಯ ವಿದ್ಯಾರ್ಥಿಗಳು ಇಂದು ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿದ್ದಾರೆ. ರಾಜ್ಯಪಾಲರಾಗಿರುವ ಅಬ್ದುಲ್‌ನಜೀರ್, ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಉಷಾರಾಣಿ ಮತ್ತು ಸಚಿವ ಯು.ಟಿ. ಖಾದರ್ ಎನ್.ಜೆ. ಕಡಂಬರ ಹಿರಿಯ ವಿದ್ಯಾರ್ಥಿಗಳು ಎಂಬುದು ಅಭಿಮಾನದ ಸಂಗತಿಯಾಗಿದೆ.
ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬ-ವರ್ಗದವರಿಗೆ ಉಂಟಾದ ದುಃಖವನ್ನು ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.