2028ಕ್ಕೆ ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಆಡಳಿತ ಶತಸಿದ್ಧ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ

2028ಕ್ಕೆ ಕರ್ನಾಟಕದಲ್ಲಿ ಬಿಜೆಪಿ ಸರಕಾರದ ಆಡಳಿತ ಶತಸಿದ್ಧ: ಸಂಸದ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ


ಬಂಟ್ವಾಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸ್ಟಿಂಗ್ ಆಪರೇಷನ್‌ನಲ್ಲಿ ಸಿಲುಕಿಸಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದಿರುವ ಭ್ರಷ್ಟ ಕಾಂಗ್ರೆಸ್ ಪಕ್ಷದ ದುರಾಡಳಿತದಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದು, 2028ರ ವಿಧಾನಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠಕಲಿಸಲಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿದ್ದಕಟ್ಟೆಯಲ್ಲಿ ಬಿಜೆಪಿ ವತಿಯಿಂದ ಕರ್ನಾಟಕ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಐದಾರು ವರ್ಷಗಳಿಂದ ತಾ.ಪಂ., ಜಿ.ಪಂ. ಚುನಾವಣೆ ಹಾಗೂ ಗ್ರಾ.ಪಂ. ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಯ ಚುನಾವಣೆ ನಡೆಸಲು ಮೀನಾಮೇಷ ನಡೆಸುತ್ತಿರುವ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಿರುವುದಲ್ಲದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ರದ್ದು ಮಾಡುವುದರೊಂದಿಗೆ ಬಡವರ ಪಾಲಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಾ ಪ್ರಹಾರಗೈದರು.

ಗ್ಯಾರಂಟಿ ಹೆಸರಲ್ಲಿ ಮತದಾರರನ್ನು ಮೋಸಗೊಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಬೊಕ್ಕಸದಲ್ಲಿ ಹಣಕಾಸುವಿನ ತೊಂದರೆಯಿಂದ ಯೋಜನೆಗಳಿಗೆ ಕತ್ತರಿ ಹಾಕುವ ಮೂಲಕ ರಾಜ್ಯದ ಜನತೆಯನ್ನು ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ ಕೋಟ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯತ್‌ಗಳಲ್ಲಿ ನೀಡುತ್ತಿರುವ 9-11 ಹಾಗೂ ಕಟ್ಟಡ ಪರವಾನಿಗೆಯನ್ನು ನಗರ ಯೋಜನ ಪ್ರಾಧಿಕಾರಗಳಿಗೆ ವರ್ಗಾಯಿಸಿ ಗ್ರಾಮೀಣ ಭಾಗದ ಸಾವಿರಾರು ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಉಪಾಧ್ಯಕ್ಷ ವಸಂತ ಕುಮಾರ್ ಅಣ್ಣಳಿಕೆ, ಬಿಜೆಪಿ ಬಂಟ್ವಾಳ ಮಂಡಲದ ಯುವಮೋರ್ಚ್ ಅಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್, ಸಂಗಬೆಟ್ಟು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಸತೀಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಕುಮಾರ್ ರಾಯಿ, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ಸಂದೇಶ ಶೆಟ್ಟಿ ಪೂಡುಂಬ, ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಮಾಜಿ ತಾ.ಪಂ. ಸದಸ್ಯ ಅರ್ಕಕೀರ್ತಿ ಇಂದ್ರ, ಪಕ್ಷದ ಸ್ಥಳೀಯ ಪ್ರಮುಖರಾದ ಸುರೇಶ್ ಕುಲಾಲ್, ಸುನೀಲ್ ಶೆಟ್ಟಿಗಾರ್, ದಾಮೋದರ ಪೂಜಾರಿ, ಉದಯ ಪೂಜಾರಿ, ದೀಪಕ್ ಶೆಟ್ಟಿಗಾರ್, ವಿಮಲಾ ಮೋಹನ್, ವಿದ್ಯಾ ಪ್ರಭು, ಗುಲಾಬಿ ಶೆಟ್ಟಿ, ಇಂದಿರಾ ಶಕ್ತಿ ಕೇಂದ್ರ ಪ್ರಮುಖರಾದ ನವೀನ ಹೆಗ್ಡೆ, ತೇಜಸ್ ಕರ್ಪೆ, ಹರೀಶ್ ಆಚಾರ್ಯ ರಾಯಿ, ಚಂದ್ರಶೇಖರ ಕರ್ಪೆ, ಮಾಧವ ಶೆಟ್ಟಿಗಾರ್, ದೇವರಾಜ್ ಸಾಲಿಯಾನ್, ಗಣೇಶ್ ಪೂಜಾರಿ, ಭೋಜ ಶೆಟ್ಟಿಗಾರ್, ಲಿಂಗಪ್ಪ ಪೂಜಾರಿ ಹಲಯಿ, ರಾಜೇಂದ್ರ ಕರ್ಪೆ, ಭಾಸ್ಕರ ಪ್ರಭು, ರಾಮಕೃಷ್ಣ ನಾಯಕ್, ವಿನೋದ್ ಅಡಪ, ನಾರಾಯಣ ಹೆಗ್ಡೆ, ಕೃಷ್ಣಪ್ಪ ಪೂಜಾರಿ ಕರ್ಪೆ, ಉದಯ ಕರ್ಪೆ ಉಪಸ್ಥಿತರಿದ್ದರು.

ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಪ್ರಭು, ಸ್ವಾಗತಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article