ನರಿಕೊಂಬು ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಅವ್ಯವಸ್ಥೆ: ಮಾಜಿ ಸಚಿವರಿಗೆ ದೂರು
ಈ ಇಳಿಜಾರು ರಸ್ತೆ ತೀರಾ ಕಿರಿದಾಗಿದ್ದು, ಇದನ್ನು ಎತ್ತರ ಕಡಿಮೆಗೊಳಿಸಿ ವಿಸ್ತರಣೆಗೊಳಿಸಬೇಕು. ಪ್ರತಿದಿನ ನೂರಾರು ವಾಹನ ಓಡಾಡುತ್ತಿದ್ದು, ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕೆಡಿಪಿ ಮಾಜಿ ಸದಸ್ಯ ಉಮೇಶ ಬೋಳಂತೂರು ಅವರು ಮಾಜಿ ಸಚಿವ ರೈ ಅವರನ್ನು ಆಗ್ರಹಿಸಿದರು. ಈಗಾಗಲೇ ವಾಹನ ಸವಾರರು ಉಪಯೋಗಿಸುತ್ತಿರುವ ಪರ್ಯಾಯ ರಸ್ತೆ ಜೈನ ಬಸದಿಯಿಂದ ಅಂಡರ್ ಪಾಸ್ ಮೂಲಕ ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ವಾಹನಗಳಿಗೆ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಸೂಚಿಸಿದರು.
ಇದೇ ವೇಳೆ ಸ್ಥಳದಲ್ಲಿದ್ದ ತಹಶೀಲ್ದಾರ್ ಜಿ.ಮಂಜುನಾಥ್ ಮತ್ತು ತಾ. ಪಂ. ಇಒ ಸಚಿನ್ ಕುಮಾರ್ ಇವರಿಗೆ ಈ ಕಾಮಗಾರಿ ಬಗ್ಗೆ ನಿಗಾ ವಹಿಸುವಂತೆಯು ಅವರು ಸೂಚಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ಪ್ರಮುಖರಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಆಲ್ಬಟ್೯ ಮಿನೇಜಸ್, ಕೃಷ್ಣಪ್ಪ ಪೂಜಾರಿ, ರವೀಂದ್ರ ಸಪಲ್ಯ, ಪ್ರಸಾದ್ ಗಾಣಿಗ, ನಿತ್ಯಾನಂದ ಕುರ್ಚಿಪಲ್ಲ, ಉಮೇಶ್ ನೆಲ್ಲಿಗುಡ್ಡೆ, ನರ್ಸಪ್ಪ ಅಮೀನ್, ಶೈಲೇಶ್ ಪೂಜಾರಿ, ಲೋಕೇಶ್, ಮೋನಪ್ಪ ನಿನ್ನಿಪಡ್ಪು, ಸತೀಶ್ ಶೇಡಿಗುರಿ ಮತ್ತಿತರರು ಇದ್ದರು.
ಮನವಿ:
ಪಾಣೆಮಂಗಳೂರು ಸತ್ಯಶ್ರೀ ಗುಡಿ ಎದುರಿನ ರಸ್ತೆ ಬದಿ ರಿಕ್ಷಾ ತಂಗುದಾಣ ನಿರ್ಮಿಸಿ ಕೊಡುವಂತೆ ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ರಿಕ್ಷಾ ಚಾಲಕರು ಮನವಿ ಸಲ್ಲಿಸಿದರು.
