ಪ್ರಗತಿಪರ ಕೃಷಿಕನ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಹೆಡ್ ಕಾನ್ಸ್‌ಟೇಬಲ್

ಪ್ರಗತಿಪರ ಕೃಷಿಕನ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಹೆಡ್ ಕಾನ್ಸ್‌ಟೇಬಲ್


ಬಂಟ್ವಾಳ: ಯಾವುದಾದರೂ ಅಮೂಲ್ಯವಾದ ವಸ್ತು ಕಳೆದುಹೋಯಿತೆಂದರೆ ಪ್ರಸಕ್ತ ಕಾಲಘಟ್ಟದಲ್ಲಿ ಮರಳಿ ಸಿಗುವುದೇ ಅಪರೂಪ. ಇಂತಹ ಸಂದರ್ಭದಲ್ಲೂ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ವೋರ್ವರು ರಸ್ತೆಯಲ್ಲಿ ಸಿಕ್ಕಿದ ಬೆಲೆಬಾಳುವ ಚಿನ್ನದ ಸರವನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ತಮ್ಮ ಕರ್ತವ್ಯದ ಜತೆ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ನಿವಾಸಿ ಬಿ.ಸಿ.ರೋಡಿನಲ್ಲಿರುವ ಗ್ಲೇವಿನ್ ಎಲೆಕ್ಟಿಕಲ್ಸ್ ಅಂಗಡಿ ಮಾಲೀಕ, ಪ್ರಗತಿಪರ ಕೃಷಿಕ ರೋನಾಲ್ಡ್ ಡಿಸೋಜಾ ಅಮ್ಟಾಡಿ  ಅವರು ನ.2 ರಂದು ಬಿ.ಸಿ.ರೋಡ್‌ನಲ್ಲಿ ತನ್ನ ಸುಮಾರು 45 ಗ್ರಾಂ. ತೂಕದ, ಅಂದಾಜು 5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳೆದುಕೊಂಡಿದ್ದರು. ಆದರೆ ಈ ಬಗ್ಗೆ ಅವರು ಪೊಲೀಸ್ ಠಾಣೆಗೆ ಯಾವುದೇ ದೂರು ನೀಡಿರಲಿಲ್ಲ.

ಅಂದು ಬಂಟ್ವಾಳ ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಕೃಷ್ಣ ನಾಯಕ್ ಎಂಬವರು ಠಾಣೆಯಿಂದ ಗಸ್ತಿಗೆಂದು ತೆರಳುತ್ತಿದ್ದಾಗ ಅವರಿಗೆ ಚಿನ್ನದ ಸರ ನಗರ ಠಾಣಾ ರಸ್ತೆಯಲ್ಲಿರುವ ಭೂ ಬ್ಯಾಂಕ್ ಮುಂಭಾಗ ದೊರಕಿತ್ತು. ಈ ವಿಚಾರವನ್ನು ಅವರು ತಮ್ಮ ಸಹದ್ಯೋಗಿ ಹೆಡ್‌ಕಾನ್‌ಸ್ಟೆಬಲ್ ಸುರೇಶ್ ಅವರಲ್ಲಿ ತಿಳಿಸಿದ್ದರು.

ರೋನಾಲ್ಡ್ ಡಿಸೋಜ ಅವರು ಅಂದು ಡಿಸಿಸಿ ಬ್ಯಾಂಕ್ ಬಿ.ಸಿ.ರೋಡು ಶಾಖೆಗೆ ತೆರಳಿ ಹಣ ಡ್ರಾ ಮಾಡಿಕೊಂಡು ವಾಪಾಸ್ ಬರುತ್ತಿದ್ದಾಗ ಕೈಯಲ್ಲಿದ್ದ ನಗದು ಹಣವನ್ನು ಕುತ್ತಿಗೆಯ ಮೂಲಕ ಶಟ್೯ ಒಳಕ್ಕಿಟ್ಟು ಕೈಯನ್ನು ಹೊರ ತೆಗೆಯುವ ಸಂದರ್ಭ ಚಿನ್ನದ ಸರವು ಆಕಸ್ಮಿಕವಾಗಿ ರಸ್ತೆಗೆ ಬಿದ್ದಿದ್ದು, ಇವರ ಗಮನಕ್ಕೆ ಬಂದಿರಲಿಲ್ಲ, ನೇರ ಮನೆಗೆ ಬಂದು ಮೈಮೇಲಿಂದ ಶಟ್೯ ತೆಗೆಯುವಾಗಲಷ್ಟೇ ಚಿನ್ನದ ಸರ ಕಳೆದು ಹೋಗಿರುವುದು ಗೊತ್ತಾಗಿದೆ. ಈ ಹಿಂದೆಯು ಒಂದೊಮ್ಮೆ ಇದೇ ರೀತಿ ಚಿನ್ನದ ಸರವನ್ನು ಕಳೆದುಕೊಂಡಿದ್ದು, ಅದು ಈ ವರೆಗೂ ಪತ್ತೆಯಾಗಿಲ್ಲ.

ಎರಡು ದಿನಗಳ ಹಿಂದೆ ರೋನಾಲ್ಡ್ ಡಿಸೋಜಾ ಅವರು ಅಗತ್ಯದ ಕೆಲಸವೊಂದರ ನಿಮಿತ್ತವಾಗಿ ನಗರ ಪೊಲೀಸ್ ಠಾಣೆಗೆ ತೆರಳಿದ್ದರು. ಈ ಸಂದರ್ಭ ಠಾಣೆಯಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ಸುರೇಶ್ ಅವರಲ್ಲಿ ಕುಶಲೋಪಚರಿ ನಡೆಸಿದಾಗ ತಾನು ಚಿನ್ನದ ಸರ ಕಳೆದುಕೊಂಡಿರುವ ವಿಚಾರವನ್ನು ರೋನಾಲ್ಡ್ ಅವರು ಹಂಚಿಕೊಂಡಿದ್ದರು.

ಕಾಕತಾಳೀಯ ಎಂಬಂತೆ ತಮಗೆ ದೊರೆತ ಚಿನ್ನದ ಸರಕ್ಕೆ ಸಂಬಂಧಿಸಿ ಕೆಲವೊಂದು ಮಾಹಿತಿಯನ್ನು ಹೆಡ್ ಕಾನ್ಸ್‌ಟೇಬಲ್‌ಗಳಾದ ಕೃಷ್ಣ ನಾಯಕ್ ಹಾಗೂ ಸುರೇಶ್ ಅವರು ರೋನಾಲ್ಡ್ ಅವರಿಂದ ಪಡೆದುಕೊಂಡರು.

ಆಗ ರೋನಾಲ್ಡ್ ಅವರು ನೀಡಿದ ಸರದ ಸಚಿತ್ರ ಮಾಹಿತಿ ಹಾಗೂ ದೊರೆತ ಸರವನ್ನು ಪರಿಶೀಲಿಸಿದಾಗ ತಾಳೆಯಾದ ಹಿನ್ನಲೆಯಲ್ಲಿ ವಾರಸುದಾರರಾದ ರೋನಾಲ್ಡ್ ಡಿಸೋಜಾ ಅವರನ್ನು ಠಾಣೆಗೆ ಕರೆಸಿಕೊಂಡ ಹೆಡ್ ಕಾನ್ಸ್‌ಟೇಬಲ್ ಕೃಷ್ಣನಾಯಕ್ ಅವರು ಚಿನ್ನದ ಸರವನ್ನು ಅವರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರ ಕಳೆದೆ ಹೋಯಿತೆಂದು ಕಂಗಾಲಾಗಿದ್ದ ರೋನಾಲ್ಡ್ ಡಿಸೋಜಾ ಅಮ್ಟಾಡಿ ಅವರಿಗೆ ಮರಳಿ ದೊರೆತಿದ್ದು ಅವರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. 

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕರ್ತವ್ಯದ ಜತೆಗೆ ಪ್ರಾಮಾಣಿಕತೆಯನ್ನೂ ಮೆರೆದ ಪೊಲೀಸ್ ಸಿಬ್ಬಂದಿಗಳಿಗೆ ರೋನಾಲ್ಡ್ ಡಿಸೋಜಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಹೆಡ್ ಕಾನ್ಸ್‌ಟೇಬಲ್‌ಗಳಾದ ಕೃಷ್ಣ ನಾಯಕ್, ಸುರೇಶ್ ಅವರನ್ನು ವಯಕ್ತಿಕ ನೆಲೆಯಲ್ಲಿ ತಮ್ಮ ಮನೆಯಲ್ಲಿ ಮುಂದಿನ ತಿಂಗಳು ನಡೆಯುವ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸುವ ಮೂಲಕ ಅವರಿಬ್ಬರ ಪ್ರಾಮಾಣಿಕತೆಯ ಸಂದೇಶವನ್ನು ಇಡೀ ಸಮಾಜಕ್ಕೆ ತಿಳಿಸಲು ರೋನಾಲ್ಡ್ ಡೀಸೋಜಾ ನಿರ್ಧರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article