10 ದಿನಗಳ ಕಾಲ - ನಾಲ್ಕು ಕಡೆ ರಾಗ ಸುಧಾರಸ ಯಕ್ಷ - ಸಂಗೀತ - ನೃತ್ಯೋತ್ಸವ
ಮಂಗಳೂರು: ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯ ರಾಗ ಸುಧಾರಸ ಯಕ್ಷ - ಸಂಗೀತ - ನೃತ್ಯೋತ್ಸವ ಈ ಬಾರಿ ಒಟ್ಟು ನಾಲ್ಕು ಕಡೆಗಳಲ್ಲಿ 10 ದಿನಗಳ ಕಾಲ ನಡೆಯಲಿದೆ.
ನ.14ರಂದು ಮಂಗಳಾದೇವಿಯ ರಾಮಕೃಷ್ಣ ಮಠದ ಅಮೃತಭವನ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಜೆ 3ಕ್ಕೆ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಶಿಷ್ಯೆಯರಿಂದ ನವಗೃಹ ಕೃತಿ ಪ್ರಸ್ತುತಿಗೊಳ್ಳಲಿದೆ. ಬಳಿಕ ಸಚಿವ ಯು.ಟಿ. ಖಾದರ್, ಸ್ವಾಮಿ ಜೀತಕಾಮಾನಂದಜಿ ಮಹಾರಾಜ್, ಶರವು ರಾಘವೇಂದ್ರ ಶಾಸ್ತ್ರಿ, ಎಂ.ಕೆ. ಸುದರ್ಶನ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಮಣಿ ಕೃಷ್ಣಸ್ವಾಮಿ ಅವರಲ್ಲಿ ತನ್ನ ಶಿಷ್ಯ ವೃತ್ತಿ ಪ್ರಾರಂಭಿಸಿ 30 ವರ್ಷಗಳಾದ ಹಿನ್ನೆಲೆಯಲ್ಲಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಈ ಬಾರಿಯ ಎಂ.ಕೆ. ಮತ್ತು ಮಣಿ ವಾರ್ಷಿಕ ಪ್ರಶಸ್ತಿಯನ್ನು ಯುವಕಲಾವಿದೆ ತನ್ಮಯಿ ಉಪ್ಪಂಗಳ ಅವರಿಗೆ ನೀಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪ್ರಾರ್ಥನಾ ಸಾಯಿ ನರಸಿಂಹನ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ ಎಂದು ಅಕಾಡೆಮಿ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.15ರಂದು ಬೆಳಗ್ಗೆ 6ಕ್ಕೆ ಸುರತ್ಕಲ್ - ಓವರ್ ತಳಭಾಗದಲ್ಲಿರುವ ಎಂಸಿಎಫ್ ನಾಗರಿಕ ಸಲಹಾ ಸಮಿತಿ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರಾರ್ಥನಾ ಸಾಯಿ ನರಸಿಂಹನ್ ಅವರ ಶಿಷ್ಯರಿಂದ 67ನೇ ಉದಯರಾಗ ಸಂಗೀತ ಕಛೇರಿ ಪ್ರಸ್ತುತಗೊಳ್ಳಲಿದೆ. 21ರ ತನಕದ ಮುಂದಿನ ಎಲ್ಲ ಕಾರ್ಯಕ್ರಮಗಳು ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಡೆಯಲಿದೆ. 15 ರಂದು ಸಂಜೆ 4ಕ್ಕೆ ಪುತ್ತೂರಿನ ಪ್ರಾರ್ಥನಾ ಬಿ. ಅವರಿಂದ ಸಂಗೀತ ಕಛೇರಿ ಪ್ರಸ್ತುತಗೊಳ್ಳಲಿದೆ. ಸಂಜೆ 5ಕ್ಕೆ ಎಡನೀರು ಮಠಾಽಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಅನಂತಪದ್ಮನಾಭ ಆಸ್ರಣ್ಣ, ಡಾ. ಎಂ ಬಿ ಪುರಾಣಿಕ್, ಡಾ. ಮೋಹನ ಆಳ್ವ ಅವರ ಉಪಸ್ಥಿತಿಯಲ್ಲಿ ಯುವ ಮೃದಂಗ ವಾದಕ ಸುನಾದಕೃಷ್ಣ ಅಮೈ ಅವರಿಗೆ ಯುವ ಕಲಾಮಣಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಂಗೀತ ವಿದ್ವಾನ್ ಎಂ.ನಾರಾಯಣ, ಯಕ್ಷಗಾನ ಹಿರಿಯ ಕಲಾವಿದ ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ ಅವರಿಗೆ ಹಿರಿಯ ಸಾಧಕ ಸನ್ಮಾನ ನೆರವೇರಲಿದೆ. ಬಳಿಕ ನಿರಂಜನ್ ದಿಂಡೋಡಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು.
ನ.16ರಂದು ಸಂಜೆ 5.30ಕ್ಕೆ ವೈ. ಜಿ. ಶ್ರೀಲತಾ ಹಾಗೂ ಪುತ್ತೂರು ನಿಕ್ಷಿತ್ ಇವರಿಂದ ವೀಣಾ-ಮೃದಂಗ ಕಾರ್ಯಕ್ರಮ ನಡೆಯಲಿದ್ದು ಬಳಿಕ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಭರತನಾಟ್ಯ ಕಾರ್ಯಕ್ರಮ, 17ರಂದು ಸಂಜೆ 5.30ಕ್ಕೆ ಅಂಕುಶ್ ಎನ್. ನಾಯಕ್ ಅವರಿಂದ ಸಿತಾರ್ ವಾದನ. ಬಳಿಕ ಈಶ್ವರ್ ಮತ್ತು ನವ್ಯಶ್ರೀ ಈಶ್ವರ್ ಅವರಿಂದ ಭಾರತ ನಾಟ್ಯ - ಸಂಗೀತ ಕಾರ್ಯಕ್ರಮ ನಡೆಯಲಿದೆ. 18ರಂದು ಸಂಜೆ 5.30ಕ್ಕೆ ಶ್ರದ್ಧಾ ಕೋಟೆ ಅವರಿಂದ ಸಂಗೀತ ಕಾರ್ಯಕ್ರಮ. ಬಳಿಕ ಸೌಪರ್ಣಿಕಾ ನಂಬಿಯಾರ್ ಇವರಿಂದ ಕೂಚುಪುಡಿ ನೃತ್ಯ ಕಾರ್ಯಕ್ರಮ. 19ರಂದು ಸಂಜೆ 5.30ಕ್ಕೆ ಶ್ರೇಯ ಕೊಳತ್ತಾಯ ಅವರಿಂದ ಶಾಸ್ತ್ರೀಯ ಸಂಗೀತ. ಬಳಿಕ ಯುಕ್ತಿ ಉಡುಪಿ ಇವರಿಂದ ಭರತನಾಟ್ಯ. 20 ರಂದು ಸಂಜೆ 5.30ಕ್ಕೆ ಹರಿಪ್ರಸಾದ್ ಸುಬ್ರಹ್ಮಣ್ಯ ಅವರಿಂದ ಕೊಳಲು ವಾದನ ಕಛೇರಿ. ಬಳಿಕ ಪಾವನಿ ಕಲ್ವಕಲ್ವ ಇವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದೆ. 21ರಂದು ಸಂಜೆ 3.30ಕ್ಕೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಬಳಿಕ ರೆಮೋನಾ ಪಿರೇರಾ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಡಿ.6 ರಂದು ಬೆಳಗ್ಗೆ ಗಂಟೆ 9ರಿಂದ ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಮೊದಲಿಗೆ ಕಾಂಚನ ಸಹೋದರಿಯರಿಂದ ಸಂಗೀತ ಕಛೇರಿ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಅನನ್ಯ ಸಂಸ್ಥೆಯ ಡಾ. ಆರ್ ವಿ ರಾಘವೇಂದ್ರ ಅವರಿಗೆ ಬಾರಿಯ ಲಲಿತಕಲಾ ಪೋಷಕ ಮಣಿ ಪ್ರಶಸ್ತಿ ಹಾಗೂ ಕಾಂಚನ ರೋಹಿಣಿ ಸುಬ್ಬರತ್ನಂ ಅವರಿಗೆ ಎ. ಈಶ್ವರಯ್ಯ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು.
ಡಿ.18ರಂದು ಸಂಜೆ 6.30ಕ್ಕೆ ಸುರತ್ಕಲ್ ನ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆರ್ಟ್ ಆಫ್ ಲಿವಿಂಗ್ ಇದರ ಹಿರಿಯ ಗುರುಗಳಾದ ಸ್ವಾಮಿ ಸೂರ್ಯಪಾದ ಇವರ ತಂಡದಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ ಎಂದರು.
ಅಕಾಡೆಮಿಯ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಗೌರವ ಸಲಹಾ ಮಂಡಳಿ ಸದಸ್ಯರಾದ ವಿದ್ವಾನ್ ನಾಗೇಶ್ ಎ. ಬಪ್ಪನಾಡು, ವಿದುಷಿ ಗೀತಾ ಸರಳಾಯ, ಖಜಾಂಚಿ ವಿಭು ರಾವ್, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ್ ರಾವ್ ಉಪಸ್ಥಿತರಿದ್ದರು.