ನ.12 ರಂದು ಜೆಡಿಎಸ್ ಸರ್ವ ಸದಸ್ಯರ ಸಭೆ
ಮಂಗಳೂರು: ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಸದಸ್ಯರ ಸಭೆ ನ.12ರಂದು ಬೆಳಗ್ಗೆ 11ಕ್ಕೆ ನಗರದ ಕೊಡಿಯಾಲ್‌ಬೈಲ್‌ನ ಹೊಟೇಲ್ ಓಷಿಯನ್ ಪರ್ಲ್‌ನಲ್ಲಿ ನಡೆಯಲಿದೆ.
ಪಕ್ಷದ ಜಿಲ್ಲಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ರಾಜ್ಯದ ಹಿರಿಯ ನಾಯಕರು, ನೂತನವಾಗಿ ಆಯ್ಕೆಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಧನರಾಜ್, ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಈ ಸಭೆಯಲ್ಲಿ ಸಿದ್ಧತೆ ನಡೆಸಲಾಗುವುದು. ಜಿಲ್ಲೆಯ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಜನಸಾಮಾನ್ಯರ ಸಮಸ್ಯೆಗಳು, ಮುಂದಿನ ಹೋರಾಟದ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಬೇಕು ಎಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷ ವಸಂತ ಪೂಜಾರಿ ಎ. ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಭಾರೀ ಪ್ರಚಾರದೊಂದಿಗೆ ಸಂಪುಟ ಸಭೆ ನಡೆಸಿ, ಜಿಲ್ಲೆಯ ಜನರಿಗೆ ಹಲವು ಭರವಸೆಗಳನ್ನು ನೀಡಿ ತೆರಳಿದ ರಾಜ್ಯ ಸರ್ಕಾರದ ಆಡಳಿತ ಯಂತ್ರವು ಜನಸಾಮಾನ್ಯರ ಬದುಕನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸಿಲ್ಲ. ಬದಲಾಗಿ ಹಾಲು, ಮೊಸರು, ಬಸ್ ಪ್ರಯಾಣ ದರ ಹಾಗೂ ಹೋಟೆಲ್ ತಿಂಡಿ -ತಿನಿಸುಗಳ ದರ ಹೆಚ್ಚಳ ಜನಸಾಮಾನ್ಯರ ಮತ್ತು ಈ ಕ್ಷೇತ್ರಗಳನ್ನು ಅವಲಂಬಿಸಿರುವ ಉದ್ಯೋಗಿಗಳಿಗೆ ತೀವ್ರ ಆಘಾತವನ್ನುಂಟುಮಾಡಿವೆ. ವಿವಿಧ ಹಗರಣಗಳ ಆರೋಪಗಳಿಂದ ಸುತ್ತುವರಿದಿರುವ ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಬಾಕಿ ಹಣವನ್ನು ಹಬ್ಬದ ಮುನ್ನ ಬಿಡುಗಡೆ ಮಾಡಲಾಗಿದೆ ಎಂದು ಭಾರೀ ಪ್ರಚಾರ ನಡೆಸಿದರೂ, ಫಲಾನುಭವಿಗಳಿಗೆ ಇಂದಿಗೂ ಹಣ ತಲುಪದಿರುವುದು ಸರ್ಕಾರದ ಘೋಷಣೆ ಮತ್ತು ಅನುಷ್ಠಾನದ ನಡುವಿನ ಅಂತರಕ್ಕೆ ಸಾಕ್ಷಿಯಾಗಿದೆ ಎಂದರು.
ಮಂಗಳೂರಿನ ಕೊಣಾಜೆಯಲ್ಲಿ ಕೆಲ ತಿಂಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ನೀಡಲಾಗುವುದು ಎಂದು ನೀಡಿದ್ದ ಭರವಸೆ ಇದುವರೆಗೆ ಈಡೇರಿಲ್ಲ. ವಿಧಾನಸೌಧದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಪುತ್ಥಳಿ ಸ್ಥಾಪಿಸಬೇಕು ಎಂದು ಹೇಳಿದರು.
ಮುಂಬರುವ ಜಿಪಂ, ತಾಪಂ, ಗ್ರಾಪಂ, ಮನಪಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಡಿ ಜೆಡಿಎಸ್ ಸ್ಪರ್ಧಿಸಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಧನರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಜೆಪ್ಪು, ರಾಜ್ಯ ಮೀನುಗಾರಿಕಾ ಘಟಕ ಅಧ್ಯಕ್ಷ ರತ್ನಾಕರ ಸುವರ್ಣ, ಮನಪಾ ಮಾಜಿ ಸದಸ್ಯ ಅಝೀಝ್ ಕುದ್ರೋಳಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನೀರ್ ಮುಕ್ಕಚೇರಿ ಉಪಸ್ಥಿತರಿದ್ದರು.