ನ.22 ರಂದು ‘ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಟಿ ಸಮುದಾಯದ ಸಮಾವೇಶ’

ನ.22 ರಂದು ‘ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಟಿ ಸಮುದಾಯದ ಸಮಾವೇಶ’

ಮಂಗಳೂರು: ಕರ್ನಾಟಕ ಮರಾಟಿ ಸಂಘ ಬೆಂಗಳೂರು ವತಿಯಿಂದ ನ.22 ರಂದು ಬೆಂಗಳೂರಿನ ವಿಜಯನಗರದ ಬಂಟ್ಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ‘ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಟಿ ಸಮುದಾಯದ ಸಮಾವೇಶ’ ಪರಿಶಿಷ್ಟ ಪಂಗಡ ಮರಾಟಿ ಸಮುದಾಯದ ಸಮಾವೇಶ ಅಲ್ಲ. ಈ ಸಮಾವೇಶದಲ್ಲಿ ಪರಿಶಿಷ್ಟ ಪಂಗಡದವರಲ್ಲದ ಉಡುಪಿ ಜಿಲ್ಲೆಯ ಕುಡುಬಿ ಜನಾಂಗದವರನ್ನು ಸೇರಿಸಿಕೊಳ್ಳಲಾಗಿದೆ. ಈ ಸಮಾವೇಶಕ್ಕೂ ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟಕ್ಕೂ ಸಂಬಂಧವಿಲ್ಲ. ಇದರಲ್ಲಿ ಭಾಗವಹಿಸದಂತೆ ಒಕ್ಕೂಟದ ಪದಾಧಿಕಾರಿಗಳು ಕರೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಾ.ಸುಂದರ ನಾಯ್ಕ್, ಬೆಂಗಳೂರಿನಲ್ಲಿ ಆಯೋಜಿಸಿರುವುದು ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ರಾಜ್ಯ ಮರಾಟಿ ಒಕ್ಕೂಟದ ಸಂಯೋಜಿತ ಮರಾಟಿ ಸೇವಾ ಸಂಘಗಳ ಸದಸ್ಯತ್ವ ಪಡೆದ ಸಂಘಗಳ ಸಮಾವೇಶವಲ್ಲ. ಒಕ್ಕೂಟದ ಆಡಳಿತ ಮಂಡಳಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು, ಸಲಹಾ ಸಮಿತಿ ಸದಸ್ಯರು ಈ ಸಮಾವೇಶದಲ್ಲಿ ಭಾಗವಹಿಸಬಾರದು ಎಂದು ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕುಡುಬಿ ಜನಾಂಗದವರನ್ನು ಸೇರಿಸಿಕೊಂಡು ನಡೆಸುತ್ತಿರುವ ಸಮಾವೇಶದ ಬಗ್ಗೆ ಬೆಂಗಳೂರು ಕರ್ನಾಟಕ ಮರಾಟಿ ಸಂಘ ರಾಜ್ಯ ಮರಾಟಿ ಒಕ್ಕೂಟದೊಡನೆ ಪೂರ್ವ ಭಾವಿಯಾಗಿ ಯಾವುದೇ ಚರ್ಚೆ ಮಾಡಿಲ್ಲ ಎಂದರು.

ಕಡುಬಿ ಜನಾಂಗದವರು ಒಬಿಸಿ ಸಮುದಾಯಕ್ಕೆ ಸೇರಿದವರು. ಅವರನ್ನು ಸೇರಿಸಿ ಸಮಾವೇಶ ಮಾಡುವುದರಿಂದ ಪ.ಪಂಗಡಕ್ಕೆ ಸೇರಿದ ಮರಾಟಿ/ಕೊಡಗು ಮರಾಠ ಪಂಗಡದವರು ಸರ್ಕಾರದಿಂದ ದೊರೆಯುವ ಸವಲತ್ತು, ಸೌಕರ್ಯ, ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಇದೆ. ಈಗಾಗಲೇ ಕುಡುಬಿ ಸಮುದಾಯದವರು ಪರಿಶಿಷ್ಟ ಪಂಗಡದ ಮರಾಟಿಗರೆಂದು ನಕಲಿ ಜಾತಿ ದೃಢೀಕರಣ ಪತ್ರವನ್ನು ಕಂದಾಯ ಇಲಾಖೆಯಿಂದ ಪಡೆದು, ಮರಾಟಿ ಸಮುದಾಯಕ್ಕೆ ದೊರೆಯುವ ಎಲ್ಲ ಸೌಲಭ್ಯಗಳನ್ನು ಕುಡುಬಿಯವರೇ ಪಡೆಯುತ್ತಿರುವ ವಿಷಾದನೀಯ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡಲು ಚಿಂತಿಸಲಾಗಿದೆ ಎಂದರು.

ಒಕ್ಕೂಟದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ, ಪ್ರಧಾನ ಕಾರ್ಯದರ್ಶಿ ವಾಸು, ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಸುಂದರ ನಾಯ್ಕ್, ಮರಾಟಿ ಸಂರಕ್ಷಣಾ ಸಮಿತಿ ಪುತ್ತೂರು ಅಧ್ಯಕ್ಷ ಅಶೋಕ್ ಕುಮಾರ್ ಕೆದಿಲ, ಹಿರಿಯರಾದ ನಟ್ಟಿ ರಾಮ ನಾಯ್ಕ್ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article