ಕರಾವಳಿಯಲ್ಲಿ ಮತ್ತೆ ಮಳೆ ಅಬ್ಬರ ಸಾಧ್ಯತೆ: ಮುಂದಿನ 3 ದಿನಗಳ ಕಾಲ ಮಳೆ ಮುನ್ಸೂಚನೆ-ಅಲರ್ಟ್ ಘೋಷಣೆ
ಮಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುಂಗಾರು ಮಳೆ ಮತ್ತೊಮ್ಮೆ ಚುರುಕುಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ ಈ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಗುರುವಾರ ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಸಂಜೆ ಸಣ್ಣ ಅವಧಿಯ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಸ್ವಲ್ಪ ಹೆಚ್ಚಿರಬಹುದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಜೊತೆಗೆ ಒಂದೆರಡು ಕಡೆ (ಉಡುಪಿ ಜಿಲ್ಲೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ) ತುಂತುರು ಮಳೆಯ ಸಾಧ್ಯತೆಯೂ ಇದೆ. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನ.8ರ ತನಕ ಮಳೆಯ ಸಾಧ್ಯತೆಗಳಿದ್ದರೂ ನಂತರ ಪ್ರಮಾಣ ಹಾಗೂ ವ್ಯಾಪ್ತಿ ಕಡಿಮೆಯಾಗುವ ಲಕ್ಷಣಗಳಿವೆ. ಉತ್ತರ ಭಾರತದ ರಾಜಸ್ಥಾನದಲ್ಲಿ ಅಧಿಕ ಒತ್ತಡದ ತಿರುವಿಕೆ ಉಂಟಾಗಿದ್ದರ ಪರಿಣಾಮದಿಂದ ಹಿಂಗಾರು ಮಾರುತಗಳಿಗೆ ಹಿನ್ನಡೆ ಉಂಟಾಗಿದೆ. ಬಂಗಾಳಕೊಲ್ಲಿಯ ಕಡೆಯಿಂದ ತೇವಾಂಶಭರಿತ ಗಾಳಿಯು ರಾಜ್ಯದ ದಕ್ಷಿಣ ಭಾಗಗಳಿಗೆ ಮಾತ್ರ ಸೀಮಿತವಾಗಿದ್ದು, ಕ್ರಮೇಣ ನವೆಂಬರ್ 10ರ ನಂತರ ಕರ್ನಾಟಕ, ಕೇರಳ ರಾಜ್ಯಗಳಿಗೆ ಮಾತ್ರ ಈ ಗಾಳಿಯ ಬೀಸುವಿಕೆ ಇರಬಹುದು.
ಮಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಬೆಳಗ್ಹಿನಿಂದ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಂಜೆ ವೇಳೆ ಮಂಗಲುರಿನಲ್ಲಿ ಉತ್ತಮ ಮಳೆಯಾಗಿದೆ. ಪಶ್ಚಿಮ ಘಟ್ಟದ ಕೆಳಭಾಗದ ಸೂಕ್ಷ್ಮ ಪ್ರದೇಶಗಳಾದ ಚಾರ್ಮಾಡಿ, ಶಿರಾಡಿ ಹಾಗೂ ಆಗುಂಬೆ ಘಾಟಿ ತಳಭಾಗದ ಸುತ್ತಮುತ್ತ ಬುಧವಾರ ಸಂಜೆ ಭಾರಿ ಮಳೆಯಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲೂ ಉತ್ತಮ ಮಳೆಯಾಗಿದೆ.