ನ.6 ರಂದು ಮಂಗಳೂರಿನಲ್ಲಿ ನಡೆಯುವ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಪ್ರತಿಭಟನೆ: ಕೇಂದ್ರ ಸಚಿವ ಸುರೇಶ್ ಗೋಪಿ, ರಾಷ್ಟ್ರೀಯ ಯುವ ನಾಯಕ ತೇಜಸ್ವಿ ಸೂರ್ಯ ಭಾಗಿ
ಮಂಗಳೂರು: ದೇಶದ ಮತಪಟ್ಟಿಯ ಸಮಗ್ರ ಶುದ್ಧಿಕರಣದ ಎಸ್ಐಆರ್ ಪ್ರಕ್ರಿಯೆ ಬಗ್ಗೆ ದೇಶಾದ್ಯಂತ ಸುಳ್ಳು ಆರೋಪಗಳನ್ನು ಮಾಡಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ರಾಹುಲ್ ಗಾಂಧಿ ಮತ್ತು ಕಾಂಗ್ರೆಸಿಗರ ಹಾಗೂ ಅದರ ಮೈತ್ರಿಕೂಟಗಳ ಹುನ್ನಾರದ ವಿರುದ್ಧ ಬಿ.ಜೆ.ಪಿ. ಪಕ್ಷದ ವತಿಯಿಂದ ನವೆಂಬರ್ 6 ರಂದು ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಾದಯಾತ್ರೆಯು ಮಂಗಳೂರಿನ ಮಿನಿ ವಿಧಾನ ಸೌಧದ ಎದುರುಗಡೆ ಕ್ಲಾಕ್ ಟವರ್ನಿಂದ ಸಂಜೆ 3 ಘಂಟೆಗೆ ಬೃಹತ್ ಪಾದಯಾತ್ರೆಯು ಹೊರಟು ಕದ್ರಿ ಮೈದಾನದ ಬಳಿ ಪ್ರತಿಭಟನಾ ಸಭೆ ನಡೆಯಲಿದೆ. ಈ ಸಾರ್ವಜನಿಕ ಸಭೆಯಲ್ಲಿ ಕೇಂದ್ರದ ಸಚಿವ ಸುರೇಶ್ ಗೋಪಿ ಮತ್ತು ಲೋಕಸಭಾ ಸದಸ್ಯ, ಪಕ್ಷದ ರಾಷ್ಟ್ರೀಯ ಯುವ ನಾಯಕ ತೇಜಸ್ವಿ ಸೂರ್ಯ ಮಾತನಾಡಲಿದ್ದಾರೆ ಎಂದು ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧಿಕಾರದ ಹಪಾಹಪಿಯಲ್ಲಿ ಚಡಪಡಿಸುತ್ತಿರುವ ಕಾಂಗ್ರೆಸ್ ದೇಶವಿರೋಧಿ ಶಕ್ತಿ, ನಕ್ಸಲ್ವಾದಿಗಳು, ಮತೀಯವಾದಿಗಳ ಜತೆಯಲ್ಲಿ ಸೇರಿಕೊಂಡು ಎಸ್ಐಆರ್ನ ನೆಪವನ್ನು ಮುಂದಿಟ್ಟು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದೆ. ಸಂವಿಧಾನಿಕ ಸಂಸ್ಥೆಗಳ ವಿರುದ್ಧ, ದೇಶದ ಪರಮೋಚ್ಚ ಸುಪ್ರೀಂ ಕೋರ್ಟ್ನ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿ ಮಾಡಲು ಹೊರಟಿದೆ. ಇವರ ಈ ಕುಟಿಲ ಷಡ್ಯಂತ್ರದ ವಿರುದ್ಧ ನಡೆಯುವ ಪ್ರತಿಭಟನೆಯಲ್ಲಿ ಉಭಯ ಜಿಲ್ಲೆಗಳ ಸಂಸದರು, ಶಾಸಕರು ಪಕ್ಷದ ಪ್ರಮುಖರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ರಾಷ್ಟ್ರೀಯ ಚಿಂತನೆಯ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದು ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.