ನ.7 ರಂದು ಬಹು ನಿರೀಕ್ಷಿತ ಕನ್ನಡ ಚಲನಚಿತ್ರ ವಾದಿರಾಜ ವಾಲಗ ಮಂಡಳಿ ಪೋಸ್ಟರ್ ಬಿಡುಗಡೆ ಸಮಾರಂಭ

ನ.7 ರಂದು ಬಹು ನಿರೀಕ್ಷಿತ ಕನ್ನಡ ಚಲನಚಿತ್ರ ವಾದಿರಾಜ ವಾಲಗ ಮಂಡಳಿ ಪೋಸ್ಟರ್ ಬಿಡುಗಡೆ ಸಮಾರಂಭ


ಮಂಗಳೂರು: ಕರಾವಳಿಯ ಹಾಸ್ಯ ನಟರ ದಂಡು ಸೇರಿಕೊಂಡಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಸಂಪೂರ್ಣಗೊಂಡಿದ್ದು ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ನ.7 ರಂದು ಸಂಜೆ 5 ಗಂಟೆಗೆ ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ನಡೆಯಲಿದೆ. ಚಿತ್ರದ ನಿರ್ಮಾಪಕ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಅವರು ಪೋಸ್ಟರ್ ಬಿಡುಗಡೆ ಮಾಡಲಿದ್ದಾರೆ. 

ವಿವಿಎಂ ಚಲನಚಿತ್ರ-ಚಿತ್ರೀಕರಣ ಬ್ರಹ್ಮಾವರ, ಮಂಗಳೂರು, ಮುಲ್ಕಿ, ಕಾಸರಗೋಡು ಮುಂತಾದ ಪ್ರದೇಶದಲ್ಲಿ ಸುಮಾರು 55 ದಿನಗಳ ಕಾಲ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ.

ಪ್ರಸಿದ್ಧ ಸಹಕಾರಿ ಧುರೀಣ ಮತ್ತು ಯಶಸ್ವಿ ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನಿರ್ಮಾಣದ ಕನ್ನಡ ಚಿತ್ರ ‘ವಿವಿಎಮ್’ ಕರಾವಳಿ ಕನ್ನಡದ ಸೊಗಡಿನಲ್ಲಿದ್ದು, ಉತ್ತಮವಾಗಿ ಮೂಡಿಬಂದಿದ್ದು ಸಂಪೂರ್ಣ ಹಾಸ್ಯದೊಂದಿಗೆ ಕುಟುಂಬ ಸಮೇತ ನೋಡುವ ಮನೋರಂಜನಾತ್ಮಕ ಚಿತ್ರವಾಗಿದೆ.

ಎಂ.ಎನ್.ಆರ್. ಪ್ರೊಡಕ್ಷನ್ ಈಗಾಗಲೇ ತಮ್ಮ ಬ್ಯಾನರ್‌ನಲ್ಲಿ ಯಶಸ್ವಿ ಸಿನೆಮಾ ಗಲಾಟೆ ಮತ್ತು ಜೋಗುಳ ಎಂಬ ಧಾರಾವಾಹಿಗಳನ್ನು ನಿರ್ಮಿಸಿದ್ದು, ಉತ್ತಮ ಅಭಿರುಚಿಯ ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುವಲ್ಲಿ ಒಲವು ತೋರಿಸಿದೆ. ಇದರ ರೂವಾರಿ ಡಾ. ಎಂ.ಎನ್.ರಾಜೇಂದ್ರ ಕುಮಾರ್ ವಿವಿಎಮ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 

ಗುಂಡುಮಾಮ ಖ್ಯಾತಿಯ ನವೀನ್ ಡಿ. ಪಡೀಲ್, ಸು ಫ್ರಮ್ ಸೊ ಖ್ಯಾತಿಯ ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪ ರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಲಕ್ಷ್ಮಣ ಮಲ್ಲೂರು, ಶೋಭರಾಜ್ ಪಾವೂರು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಇದ್ದರೆ, ಅರ್ಜುನ್ ವೇದಾಂತ್, ಅಥರ್ವ ಪ್ರಕಾಶ್, ತನ್ವಿ ರಾವ್, ವೇನ್ಯ ರೈ ಮುಂತಾದವರು ನಾಯಕ, ನಾಯಕಿಯರಾಗಿ ಮಿಂಚಿದ್ದಾರೆ. 

ಅನುಭವಿ ಛಾಯಾಗ್ರಾಹಕ ಚೆನ್ನೈಯ ಎಸ್. ಚಂದ್ರಶೇಖರನ್ ಕೈಚಳಕ ಚಿತ್ರಕ್ಕಿದೆ. ಮಣಿಕಾಂತ್ ಕದ್ರಿ ಯವರ ಸಂಗೀತ ಸಿನಿ ರಸಿಕರ ಮನತಣಿಸಲಿದೆ. ಸ್ಟಂಟ್ ಟೈಗರ್ ಶಿವು ಸಾಹಸವಿದೆ. ವಿನಾಯಕ ಆಚಾರ್ಯ ನೃತ್ಯ ನಿರ್ದೇಶನವಿದೆ. ಜಯಪ್ರಕಾಶ್ ತುಂಬೆಯವರು ಸಹ ನಿರ್ಮಾಪಕರಾಗಿ ಸಹಕರಿಸಿದ್ದಾರೆ. ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಪ್ರೊಡಕ್ಷನ್ ಮಾನೇಜರ್ ಆಗಿ ದುಡಿದಿದ್ದಾರೆ. ಪ್ರಸಿದ್ದ ಕಲಾವಿದ ದೇವಿ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.

ವರಾಹ ರೂಪಂ ಹಾಡಿನ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ, ಸಾಹಿತಿ ಶಶಿರಾಜ್ ಕಾವೂರು ಈ ಚಿತ್ರವನ್ನು ರಚಿಸಿ ನಿರ್ದೇಶಿಸಿದ್ದಾರೆ. ಪ್ರಶಸ್ತಿ ವಿಜೇತ ಪ್ರಕಾಶ್ ತುಮಿನಾಡು ಕರಾವಳಿಯ ಅಪ್ಪಟ ಪ್ರತಿಭೆ. ಕಾಂತಾರ, ಸು ಫ್ರಮ್ ಸೊ ಮುಂತಾದ ಚಿತ್ರಗಳಲ್ಲಿ ಪ್ರಸಿದ್ದರಾದ ಪ್ರಕಾಶ್ ರಿಗೆ ‘ವಿವಿಎಮ್’ ನೂರನೇ ಚಿತ್ರ.

ಹಾಸ್ಯ ಮತ್ತು ಕುತೂಹಲಭರಿತ ಕಥಾಹಂದರ ಹೊಂದಿರುವ ವಾದಿರಾಜ ವಾಲಗ ಮಂಡಳಿ ಕನ್ನಡ ಚಲನಚಿತ್ರ ಕುಟುಂಬ ಸಮೇತ ಒಟ್ಟಾಗಿ ಕುಳಿತು ನೋಡಬಹುದಾದ ಮನರಂಜನಾತ್ಮಕ ಸಿನೆಮಾವಾಗಿ ಮೂಡಿಬರಲಿದೆ.  ಕರಾವಳಿಯ ಸಂಭಾಷಣಾ ಶೈಲಿ ಮತ್ತು ಕಥಾಹಂದರ ಇದರ ಧನಾತ್ಮಕ ಅಂಶಗಳು.

ಚಲನಚಿತ್ರದ ನವಿರಾದ ಹಾಸ್ಯ ಮತ್ತು ಗುಣಮಟ್ಟವನ್ನು ನೋಡಿ ಇದನ್ನು ನೆರೆರಾಜ್ಯದ ಕೇರಳಿಗರೂ ಇಷ್ಟ ಪಡುತ್ತಾರೆ ಎಂಬ ವಿಶ್ವಾಸದಿಂದ ಇದನ್ನು ಮಲೆಯಾಳಂ, ತಮಿಳು ಹಾಗೂ ತೆಲುಗು ಭಾಷೆಗೂ ಡಬ್ವಿಂಗ್ ಮಾಡಿಸು ವ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸಹ ನಿರ್ಮಾಪಕ ಜಯಪ್ರಕಾಶ್ ತುಂಬೆ ತಿಳಿಸಿದರು. 

ಸಂಗೀತಮಯ ಸಿನೆಮ: ವಿವಿಎಂ..!

ಸಿನೆಮಾದಲ್ಲಿ ಎಂಟು ಹಾಡುಗಳಿದ್ದು, ನಾಲ್ಕು ಪೂರ್ಣ ಪ್ರಮಾಣದ ಹಾಡಾಗಿದ್ದರೆ ನಾಲ್ಕು ತುಣುಕು ಹಾಡುಗಳಿವೆ. ಬ್ರಹ್ಮಕಲಶ ಹಾಡು ಹಾಡಿದ ಕೆನಡಾ ಮೂಲದ ಆಭಿ ವಿ, ವರಾಹರೂಪಂ ಹಾಡಿದ ಚೆನ್ನೈ ಮೂಲದ ಸಾಯಿವಿಘ್ನೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು, ಮಣಿಕಾಂತ್ ಕದ್ರಿ ಮುಂತಾದವರು ಹಾಡುಗಳಿಗೆ ದನಿಯಾಗಿದ್ದು ಎಲ್ಲಾ ಹಾಡುಗಳು ಇಂಪಾಗಿ ಮೂಡಿಬಂದಿವೆ. ತೆರೆಗೆ ಬರಲು ತಯಾರಿದ್ದರೂ ಬೇರೆ ಸಿನೆಮಾಗಳಿಗೆ ಸ್ಪರ್ಧೆ ಆಗದಂತೆ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರಕುಮಾರ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article