ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್: ದೀರ್ಘಾವಧಿಯ ಚೇರ್ ಕಾರ್ ರೈಲು ಸೇವೆ

ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್: ದೀರ್ಘಾವಧಿಯ ಚೇರ್ ಕಾರ್ ರೈಲು ಸೇವೆ

ಮಂಗಳೂರು: ಬೆಂಗಳೂರು ಮತ್ತು ಗೋವಾ ನಡುವಿನ ರೈಲು ಪ್ರಯಾಣಕ್ಕೆ ಹೊಸ ಆಯಾಮ ನೀಡಲಿರುವ ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದ ದೀರ್ಘಾವಧಿಯ ಚೇರ್ ಕಾರ್ ರೈಲು ಸೇವೆಗಳಲ್ಲಿ ಒಂದಾಗಲಿದೆ. ಸುಮಾರು 13 ಗಂಟೆ 20 ನಿಮಿಷಗಳ ಪ್ರಯಾಣಾವಧಿ ಹೊಂದಿರುವ ಈ ರೈಲು, ಕರಾವಳಿ ಕರ್ನಾಟಕದ ಹಲವು ಪ್ರಮುಖ ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸಲಿದೆ.

ರೈಲ್ವೆ ಮಂಡಳಿ ಅ. 30ರಂದು ಹೊಸ ವಂದೇ ಭಾರತ್ ರೈಲು ಸೇವೆಗೆ ಅನುಮೋದನೆ ನೀಡಿದ್ದು, 26655/26656 ಸಂಖ್ಯೆಗಳೊಂದಿಗೆ ರೈಲು ಸಂಚಾರ ನಡೆಸಲಿದೆ. ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುವ ಈ ರೈಲು ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕವನ್ನು ಮತ್ತಷ್ಟು ಸುಗಮಗೊಳಿಸಲಿದೆ. ಯಶವಂತಪುರದಿಂದ ಮಡಗಾಂವ್‌ಗೆ ತೆರಳುವ 26655 ಸಂಖ್ಯೆಯ ವಂದೇ ಭಾರತ್ ಎಕ್ಸ್‌ಪ್ರಸ್  ಬೆಳಗ್ಗೆ 7.35ಕ್ಕೆ ಯಶವಂತಪುರದಿಂದ  ಹೊರಟು ರಾತ್ರಿ 8.55ಕ್ಕೆ ಗೋವಾ ತಲುಪಲಿದೆ. ಒಟ್ಟು ಪ್ರಯಾಣಾವಧಿ 13 ಗಂಟೆ 20 ನಿಮಿಷಗಳು. ಹಿಂತಿರುಗುವ 26656 ಸಂಖ್ಯೆಯ ರೈಲು ಮಡಗಾಂವ್‌ನಿಂದ ಬೆಳಗ್ಗೆ 8.20ಕ್ಕೆ ಹೊರಟು ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ. ಈ ಪ್ರಯಾಣಕ್ಕೆ 12 ಗಂಟೆ 55 ನಿಮಿಷಗಳು ಬೇಕಾಗಲಿವೆ. ಹೊಸ ವಂದೇ ಭಾರತ್ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರಸ್ತೆ ಮತ್ತು ಕಾರವಾರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

ಇದರಿಂದ ಕರಾವಳಿ ಕರ್ನಾಟಕದ ಪ್ರಯಾಣಿಕರಿಗೆ ಬೆಂಗಳೂರು ಹಾಗೂ ಗೋವಾ ನಡುವೆ ನೇರ ರೈಲು ಸಂಪರ್ಕ ದೊರೆಯಲಿದೆ. ವಿಶೇಷವಾಗಿ ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ ಮತ್ತು ಕಾರವಾರ ಭಾಗದ ಪ್ರಯಾಣಿಕರಿಗೆ ಈ ಸೇವೆ ಅನುಕೂಲಕರವಾಗಲಿದೆ.  ಯಶವಂತಪುರದಿಂದ ಮಡಗಾಂವ್‌ಗೆ ತೆರಳುವ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸಲಿದೆ. ಮಡಗಾಂವ್ನಿಂದ ಯಶವಂತಪುರಕ್ಕೆ ಬರುವ ರೈಲು ಗುರುವಾರ ಹೊರತುಪಡಿಸಿ ಉಳಿದ ಆರು ದಿನ ಸಂಚಾರ ನಡೆಸಲಿದೆ. ಹೊಸ ರೈಲು ಸೇವೆಯ ಆರಂಭದ ದಿನಾಂಕ ಮತ್ತು ಟಿಕೆಟ್ ದರಗಳನ್ನು ರೈಲ್ವೆ ಇಲಾಖೆ ಇನ್ನೂ ಪ್ರಕಟಿಸಿಲ್ಲ.

ಹೊಸ ಯಶವಂತಪುರ-ಮಡಗಾಂವ್ ವಂದೇ ಭಾರತ್ ಸೇವೆ ಆರಂಭವಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಸಂಚರಿಸುತ್ತಿರುವ ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ (20645/20646) ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಬೆಂಗಳೂರು-ಗೋವಾ ನಡುವಿನ ಸಂಪರ್ಕವನ್ನು ವಿಸ್ತರಿಸುವ ಈ ಹೊಸ ರೈಲು ಸೇವೆಯು ಕರಾವಳಿ ಕರ್ನಾಟಕದ ರೈಲು ಪ್ರಯಾಣಿಕರಿಗೆ ಹೊಸ ಆಯ್ಕೆಯನ್ನು ಒದಗಿಸಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article