ಶಕ್ತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ: ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಉತ್ಸಾಹದಿಂದ ಗಮನ ಸೆಳೆದ ಪುಟಾಣಿ ಕ್ರೀಡಾಪಟುಗಳು

ಶಕ್ತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ: ಕ್ರೀಡಾಸ್ಫೂರ್ತಿ, ಶಿಸ್ತು ಹಾಗೂ ಉತ್ಸಾಹದಿಂದ ಗಮನ ಸೆಳೆದ ಪುಟಾಣಿ ಕ್ರೀಡಾಪಟುಗಳು


ಮಂಗಳೂರು: ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಶಕ್ತಿ ಪ್ರಾಥಮಿಕ ಶಾಲೆಯ ಎಲ್‌ಕೆಜಿ, ಯುಕೆಜಿ ಮತ್ತು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ 2026-27ಕ್ಕೆ ಶುಕ್ರವಾರ ಶಾಲಾ ಆವರಣದ ಕ್ರೀಡಾಂಗಣದಲ್ಲಿ ಸಂಭ್ರಮದ ಚಾಲನೆ ನೀಡಲಾಯಿತು.


ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಭಕ್ತಿ, ನಿಷ್ಠಾ, ಕರುಣಾ ಹಾಗೂ ಶ್ರದ್ಧಾ ಎಂಬ ನಾಲ್ಕು ಮನೆಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳನ್ನು ಪ್ರತಿನಿಧಿಸುತ್ತಾ ಶಿಸ್ತು, ಏಕತೆ ಹಾಗೂ ಸಮನ್ವಯದೊಂದಿಗೆ ಪಥಸಂಚಲನದಲ್ಲಿ ಪಾಲ್ಗೊಂಡರು. ಕೆಂಪು, ನೀಲಿ, ಹಸಿರು ಹಾಗೂ ಹಳದಿ ಬಣ್ಣಗಳ ಉಡುಪಿನಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಬಳಿಕ ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ವಿಭಾಗದ ಪುಟಾಣಿ ವಿದ್ಯಾರ್ಥಿಗಳಿಂದ ಆಕರ್ಷಕ ಡ್ರಿಲ್ ಪ್ರದರ್ಶನ ನಡೆಯಿತು. ಪುಟಾಣಿಗಳ ಲಯಬದ್ಧ ಚಲನೆ ಹಾಗೂ ಉತ್ಸಾಹ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.


ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಭಾರತಿಯ ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಭೋಜರಾಜ್ ಕಲ್ಲಡ್ಕ ಮಾತನಾಡಿ, ಕ್ರೀಡೆಯೆಂದರೆ ಕೇವಲ ಆಟವಾಡುವುದಕ್ಕೆ ಸೀಮಿತವಲ್ಲ. ಅದು ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವ ಪ್ರಮುಖ ಸಾಧನವಾಗಿದೆ ಎಂದರು. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಒಂದಲ್ಲ ಒಂದು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು, ನಿರಂತರ ಅಭ್ಯಾಸ, ಶಿಸ್ತು, ಪರಿಶ್ರಮ ಹಾಗೂ ದೃಢಸಂಕಲ್ಪದೊಂದಿಗೆ ಮುನ್ನಡೆಯಬೇಕು. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ತಮ್ಮ ಶಾಲೆ ಹಾಗೂ ದೇಶಕ್ಕೆ ಕೀರ್ತಿ ತರಬೇಕು ಎಂದು ಕರೆ ನೀಡಿದರು. ಕ್ರೀಡೆಯು ಆತ್ಮವಿಶ್ವಾಸ, ಸಹಕಾರ ಮನೋಭಾವ, ನಾಯಕತ್ವ ಗುಣ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ ಎಂದು ತಿಳಿಸಿದರು.


ಶಿಕ್ಷಣ ತಜ್ಞೆ, ಮಕ್ಕಳ ಮನೋವಿಜ್ಞಾನಿ ಮತ್ತು ಹಕುನಾ ಮಟಾಟಾ ಅಡ್ವೆಂಚರ್ಸ್ನ ಸಂಸ್ಥಾಪಕಿ ಅಂಜನಾ ಕಾಮತ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಆದರೆ ಕೇವಲ ಗೆಲುವೊಂದೇ ನಮ್ಮ ಗುರಿಯಾಗಬಾರದು. ಪ್ರತಿಯೊಂದು ಕ್ರೀಡೆಯಲ್ಲಿಯೂ ಆಸಕ್ತಿಯಿಂದ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಮಕ್ಕಳು ಕ್ರೀಡೆಯಲ್ಲಿ ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದಕ್ಕಿಂತ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆಯೇ ಎಂಬುದು ಮುಖ್ಯ. ಆದ್ದರಿಂದ ಪೋಷಕರು ಮಕ್ಕಳು ಮನೆಗೆ ಹಿಂದಿರುಗಿದಾಗ, ‘ನೀನು ಎಷ್ಟನೇ ಸ್ಥಾನ ಪಡೆದೆ?’ ಎಂದು ಕೇಳುವ ಬದಲು, ‘ನೀನು ಸ್ಪರ್ಧೆಯಲ್ಲಿ ಭಾಗವಹಿಸಿದ್ದೆಯಾ?’ ಎಂದು ಕೇಳಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. 


ಕ್ರೀಡೆಯಲ್ಲಿ ಸೋಲು-ಗೆಲುವು ಸಹಜವಾಗಿದ್ದು, ಸೋಲನ್ನು ಸವಾಲಾಗಿ ಸ್ವೀಕರಿಸಿ, ಗೆಲುವನ್ನು ವಿನಮ್ರತೆಯಿಂದ ಸಂಭ್ರಮಿಸುವ ಗುಣವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಪೋಷಕರು ಮಕ್ಕಳ ಆಸಕ್ತಿ ಹಾಗೂ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.


ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ಕ್ರೀಡೆಯು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡೆಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಹಾಗೂ ಕ್ರೀಡಾಸ್ಫೂರ್ತಿಯೊಂದಿಗೆ ಮುನ್ನಡೆಯಬೇಕು ಎಂದು ಹಾರೈಸಿದರು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ಸಾಧನೆಯ ಮೂಲಕ ಶಕ್ತಿ ವಿದ್ಯಾಸಂಸ್ಥೆಯ ಹೆಸರನ್ನು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪಸರಿಸುವ ಸಾಧಕರಾಗಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.


ಶಾಲೆಯ ಪ್ರಾಂಶುಪಾಲೆ ಡಾ. ಸುರೇಖಾ ಆರ್. ಭಟ್ ಮಾತನಾಡಿ, ವಿದ್ಯಾರ್ಥಿಗಳ ಇಂದಿನ ಪಥಸಂಚಲನವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಅತ್ಯಂತ ಶಿಸ್ತು, ಸಮನ್ವಯ ಹಾಗೂ ಆತ್ಮವಿಶ್ವಾಸದಿಂದ ಪಥಸಂಚಲನದಲ್ಲಿ ಭಾಗವಹಿಸಿರುವುದು ಶಾಲೆಯ ಶಿಸ್ತುಬದ್ಧ ಶಿಕ್ಷಣ ಹಾಗೂ ಉತ್ತಮ ತರಬೇತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಇದೇ ರೀತಿಯ ಶಿಸ್ತು, ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿಯನ್ನು ಜೀವನದಲ್ಲಿಯೂ ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಭವಿಷ್ಯದಲ್ಲಿ ಉನ್ನತ ಗುರಿ ತಲುಪಬೇಕು ಎಂದು ಹುರಿದುಂಬಿಸಿದರು.


ಶಕ್ತಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಕೆ.ಸಿ. ನಾಕ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಕ್ರೀಡೆ ಹಾಗೂ ಶಿಕ್ಷಣ ಎರಡರಲ್ಲಿಯೂ ಉತ್ತಮ ಸಾಧನೆ ಮಾಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮುಖ್ಯ ಅತಿಥಿಗಳು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಪದಕಗಳನ್ನು ಪ್ರದಾನ ಮಾಡಿ ಅಭಿನಂದಿಸಿದರು. ವಿಜೇತ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.


ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಭೋಜರಾಜ್ ಕಲ್ಲಡ್ಕ ಹಾಗೂ ವಿಶೇಷ ಆಹ್ವಾನಿತರಾದ ಅಂಜನಾ ಕಾಮತ್ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಸುಷ್ಮಾ ಸತೀಶ್ ಸ್ವಾಗತಿಸಿದರು. ಶಿಕ್ಷಕಿ ಆನೆಟ್ ಪರಬ್ ಕಾರ್ಯಕ್ರಮ ನಿರೂಪಿಸಿದರು. ಪ್ರವಲಿಕಾ ನಿರ್ವಹಿಸಿದರು.






Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article