‘ಕೊಂಕಣಿ ಸಂಗೀತ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಅತ್ಯಂತ ಮಹತ್ತರರ ಸಾಧನೆ’: ಡಾ. ಪ್ರಮೋದ್ ಸಾವಂತ್

‘ಕೊಂಕಣಿ ಸಂಗೀತ ಜಗತ್ತಿನಾದ್ಯಂತ ಪಸರಿಸುತ್ತಿರುವುದು ಅತ್ಯಂತ ಮಹತ್ತರರ ಸಾಧನೆ’: ಡಾ. ಪ್ರಮೋದ್ ಸಾವಂತ್


ಮಂಗಳೂರು: "ಇಲ್ಲಿ ನಡೆಯುತ್ತಿರುವ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನವು ಪ್ರತಿಯೊಬ್ಬ ಕೊಂಕಣಿ ಭಾಷಿಕನಿಗೆ ಅತೀವ ಹೆಮ್ಮೆಯ ವಿಷಯ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮೂಲಕ ಕೊಂಕಣಿ ಸಂಗೀತವನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವುದು ನಮಗೆಲ್ಲರಿಗೂ ಅತ್ಯಂತ ಮಹತ್ತರವಾದ ಸಾಧನೆಯಾಗಿದೆ" ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಬಣ್ಣಿಸಿದರು.

ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘಟನೆ ’ಮಾಂಡ್ ಸೊಭಾಣ್’ನ 40ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ 13 ದಿನಗಳ ಐತಿಹಾಸಿಕ ’ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ’ವನ್ನು ಮಂಗಳವಾರ ಮುಂಜಾನೆ ಉದ್ಘಾಟಿಸಿ, ಬೆಳಗ್ಗೆ 6 ಗಂಟೆಗೆ ಸಾಂಪ್ರದಾಯಿಕ ’ಗುಮಟ’ ವಾದ್ಯ ನುಡಿಸುವ ಮೂಲಕ ನಿರಂತರ ಗಾಯನ ಮ್ಯಾರಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

"ಜಗತ್ತಿನಲ್ಲಿ ಪ್ರತಿ ಬಾರಿಯೂ ಹತ್ತು ಹಲವು ಬಗೆಯ ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾಗುತ್ತವೆ. ಆದರೆ, ನಮ್ಮ ಕೊಂಕಣಿ ಸಂಗೀತದ ವಿಶ್ವದಾಖಲೆಯೊಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿ ನಿಲ್ಲುತ್ತಿರುವುದು ನಿಜಕ್ಕೂ ಅದ್ಭುತ ಸಂಗತಿ. ಸತತ 12 ದಿನಗಳ ಕಾಲ ಕಿಂಚಿತ್ತೂ ನಿಲ್ಲದೇ, ಆಯಾಸವಿಲ್ಲದೆ ಈ ಗಾನಯಾತ್ರೆಯಲ್ಲಿ ಪಾಲ್ಗೊಂಡು ದಾಖಲೆ ಬರೆಯುವುದು ಸಣ್ಣ ಮಾತಲ್ಲ. ಇದು ಬೃಹತ್ ಸಾಧನೆ. ಈ ದಾಖಲೆಯು ಪ್ರತಿಯೊಬ್ಬ ಕೊಂಕಣಿ ಭಾಷಿಕನ ಹೆಸರಲ್ಲಿ, ನಮ್ಮೆಲ್ಲರ ಹೆಸರಲ್ಲಿ ಶಾಶ್ವತವಾಗಿ ನಿಲ್ಲಲಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ" ಎಂದರು. 

"ಕೇವಲ ಗೋವಾ, ಕರ್ನಾಟಕ ಅಥವಾ ಮಹಾರಾಷ್ಟ್ರ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ವಿಶ್ವದ ನಾನಾ ಮೂಲೆಗಳಿಂದ ಆಗಮಿಸಿ ಈ 12 ದಿನಗಳ ನಿರಂತರ ಗಾಯನದಲ್ಲಿ ಪಾಲ್ಗೊಳ್ಳುತ್ತಿರುವ ಪ್ರತಿಯೊಬ್ಬ ಕಲಾವಿದನಿಗೂ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ 40 ವರ್ಷಗಳಿಂದ ಕೊಂಕಣಿ ಭಾಷೆಯನ್ನು ಉಳಿಸಿ-ಬೆಳೆಸಲು ನಿರಂತರ ಶ್ರಮಿಸುತ್ತಿರುವ ಮಾಂಡ್ ಸೊಭಾಣ್ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಅದರಲ್ಲೂ ಗುರ್ಕಾರ್ ದಿವಂಗತ ಎರಿಕ್ ಒಝಾರಿಯೊ ಅವರ ದೂರದೃಷ್ಟಿ ಅಪಾರವಾದುದು. ಇಲ್ಲಿ ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿ ಉಳಿಯಲೇಬೇಕು ಎಂದು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಅವರ ಕೊಡುಗೆ ಅವಿಸ್ಮರಣೀಯ. ನಾವೆಲ್ಲರೂ ಒಂದು ಕಾಲದಲ್ಲಿ ಗೋವಾದಿಂದಲೇ ಒಟ್ಟಾಗಿ ಬಂದವರು" ಎಂದು ಭಾವುಕರಾಗಿ ಸ್ಮರಿಸಿದರು.

ಅಲ್ಲದೆ, "ಗೋವಾದಲ್ಲಿ ಕೊಂಕಣಿ ಅಧಿಕೃತ ಭಾಷೆಯಾಗಿದ್ದು, ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಮಂಗಳೂರಿನ ಕೊಂಕಣಿ ಭಾಷಿಕರು ಯಾವುದೇ ಸರ್ಕಾರಿ ವ್ಯವಸ್ಥೆಗಳ ನೆರವಿಲ್ಲದೆ ತಮ್ಮ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಭಾಷೆಯನ್ನು ಜೀವಂತವಾಗಿಟ್ಟಿದ್ದಾರೆ. ಗೋವಾದ ಹೊರಗಿರುವ ಕೊಂಕಣಿ ಸಾಧಕರನ್ನೂ ಗೋವಾ ಸರ್ಕಾರ ತನ್ನ ಅಧಿಕೃತ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸಲಿದೆ. ಗಡಿಗಳು ಬೇರೆಯಾಗಿದ್ದರೂ ಗೋವಾ ಮತ್ತು ಕರಾವಳಿ ಕರ್ನಾಟಕ ಒಂದೇ ಸಂಸ್ಕೃತಿ, ಕರಾವಳಿ ಮತ್ತು ಜೀವನಶೈಲಿಯನ್ನು ಹೊಂದಿವೆ" ಎಂದು ತಿಳಿಸಿದರು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಆಶೀರ್ವಚನ ನೀಡಿದರು. 

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೋವಾದ ಶಾಸಕರಾದ ಮೈಕಲ್ ಲೋಬೋ ಮತ್ತು ದೆಲಿಲಾ ಲೋಬೋ, ಸ್ವಾಗತ ಸಮಿತಿ ಸದಸ್ಯ ಡಾಲ್ಫಿ ಪ್ರಶಾಂತ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಜಾಯ್ಸ್ ಒಝಾರಿಯೊ, ರಾಯ್ ಕ್ಯಾಸ್ಟೆಲಿನೊ, ಪ್ರಕಾಶ್ ಶೆಟ್ಟಿ ಮಂಗಳೂರು, ಎರಿಕ್ ಕೊರೆಯಾ, ರೊನಾಲ್ಡ್ ಸಿಲ್ವನ್ ಡಿಸೋಜ ಹಾಗೂ ಕೃಷ್ಣಪ್ರಸಾದ್ ಮಾಂಡ್ ಸೊಭಾಣ್ ಅಧ್ಯಕ್ಷ ಲೂಯಿಸ್ ಜೆ. ಪಿಂಟೊ, ರೈನೆಲ್ ಸಿಕ್ವೇರಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article