ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾಥಿ೯ಗಳ ಸ್ಟಾರ್ಟ್ಅಪ್: ಸರಕಾರದಿಂದ 38ಲಕ್ಷ ಅನುದಾನ

ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾಥಿ೯ಗಳ ಸ್ಟಾರ್ಟ್ಅಪ್: ಸರಕಾರದಿಂದ 38ಲಕ್ಷ ಅನುದಾನ


ಮೂಡುಬಿದಿರೆ: ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ (ಎಐಇಟಿ) ವಿದ್ಯಾರ್ಥಿಗಳ ಸ್ಟಾರ್ಟ್ಅಪ್ ಲೊರೆಂಟಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕ ಸರ್ಕಾರದ ‘ಇಲೆವೇಟ್ ಶಕ್ತಿ-2026’ ಯೋಜನೆಯಡಿ ₹38 ಲಕ್ಷ ಅನುದಾನ ಪಡೆದು ಸಾಧನೆ ಮಾಡಿದೆ.

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಕರ್ನಾಟಕ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ (ಕೆ-ಟೆಕ್) ಮೂಲಕ ಈ ಅನುದಾನ ಮಂಜೂರಾಗಿದೆ.

ಆಳ್ವಾಸ್ ಟೆಕ್ನಾಲಜಿ ಸೆಂಟರ್‌ನಲ್ಲಿ ಅಭಿವೃದ್ಧಿಪಡಿಸಿರುವ ಈ ಸ್ಟಾರ್ಟ್ಅಪ್, ‘ಪ್ರಿಂಟ್ ಪಾಯಿಂಟ್’ ಬ್ರ್ಯಾಂಡ್ ಹೆಸರಿನಲ್ಲಿ ಸ್ವಯಂಚಾಲಿತ ದಾಖಲೆ ಮುದ್ರಣ ಯಂತ್ರವನ್ನು ರೂಪಿಸಿದೆ. ಸಾರ್ವಜನಿಕರಿಗೆ ದಾಖಲೆಗಳ ಮುದ್ರಣ ಸೌಲಭ್ಯವನ್ನು ಸರಳಗೊಳಿಸುವುದು ಇದರ ಉದ್ದೇಶವಾಗಿದೆ.

ಎಐಇಟಿಯ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿಗಳಾದ ರಂಜನಾ ಪ್ರಸಾದ್ ಸಿ.ಎಚ್., ಪ್ರಸನ್ನ, ಸುಹಾಸ್, ಮನೋಜ್ ಹಾಗೂ ಡೇಟಾ ಸೈನ್ಸ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿ ಸಮರ್ಥ್ ಜೋಶಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆಳ್ವಾಸ್ ಟೆಕ್ನಾಲಜಿ ಸೆಂಟರ್ ಮಾರ್ಗದರ್ಶನದಲ್ಲಿ 13ಕ್ಕೂ ಹೆಚ್ಚು ವಿದ್ಯಾರ್ಥಿ ಸ್ಟಾರ್ಟ್ಅಪ್‌ಗಳು ಮತ್ತು ಆ್ಯಪ್‌ಗಳು ರೂಪುಗೊಂಡಿದ್ದು, 10 ಪೂರ್ಣ ಪ್ರಮಾಣದ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ನಾವೀನ್ಯತೆಗೆ ಪ್ರೋತ್ಸಾಹ ನೀಡಲು ಎಐಸಿಟಿಇ ಐಡಿಯಾ ಲ್ಯಾಬ್, ಸರ್ಫೇಸ್ ಮೌಂಟ್ ಟೆಕ್ನಾಲಜಿ ಲ್ಯಾಬ್, ಎನ್‌ವಿಡಿಯಾ ಲ್ಯಾಬ್ ಹಾಗೂ ಐಬಿಎಂ ಎಐ ಲ್ಯಾಬ್ ಸೇರಿದಂತೆ ಹಲವು ಪ್ರಯೋಗಾಲಯಗಳಿವೆ.

ಕಳೆದ ವರ್ಷವೂ ಆಳ್ವಾಸ್‌ನ ವಿದ್ಯಾರ್ಥಿ ಸ್ಟಾರ್ಟ್ಅಪ್ ವಿಧ್‌ಸೂತ್ರ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮಣಿಪಾಲ್ ಯೂನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್‌ಕ್ಯುಬೇಟರ್ (ಎಂಯುಟಿಬಿಐ) ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿಧಿ-ಪ್ರಯಾಸ್ ಯೋಜನೆಯಡಿ ₹9 ಲಕ್ಷ ಅನುದಾನ ಪಡೆದಿತ್ತು.

ವಿದ್ಯಾರ್ಥಿಗಳ ಆಲೋಚನೆಗಳನ್ನು ಉತ್ಪನ್ನಗಳಾಗಿ ಹಾಗೂ ಉತ್ಪನ್ನಗಳನ್ನು ಉದ್ಯಮಗಳಾಗಿ ರೂಪಿಸಲು ಆಳ್ವಾಸ್ ಟೆಕ್ನಾಲಜಿ ಸೆಂಟರ್ ಮಾರ್ಗದರ್ಶನ, ತಾಂತ್ರಿಕ ಬೆಂಬಲ ಮತ್ತು ಇನ್‌ಕ್ಯುಬೇಷನ್ ಸೌಲಭ್ಯ ಒದಗಿಸುತ್ತಿದೆ. ವಿದ್ಯಾರ್ಥಿಗಳು ಉದ್ಯೋಗ ಅರಸುವವರಾಗದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂಬುದು ಸಂಸ್ಥೆಯ ಆಶಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಎಐಇಟಿ ಪ್ರಾಚಾರ್ಯ ಡಾ. ಪೀಟರ್ ಫೆರ್ನಾಂಡಿಸ್, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ದೇವಿದಾಸ್ ಭಟ್, ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಅಸ್ಲಂ ನಂದ್ಯಾಲ್ ಹಾಗೂ ಆಳ್ವಾಸ್ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ವೇಣು ರಾವ್ ದೇವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article