ಮೂಡುಬಿದಿರೆ: ರೈತರ ಜಮೀನಿಗೆ ಹೊಂದಿಕೊಂಡಿರುವ ರಸ್ತೆ ಬದಿಯ ಸರ್ಕಾರಿ ಜಮೀನುಗಳಲ್ಲಿ ರೈತರ ಸಹಭಾಗಿತ್ವದೊಂದಿಗೆ ಸಾಗುವಳಿ ಮತ್ತು ಇತರ ಆರ್ಥಿಕ ಮೌಲ್ಯದ ಜಾತಿಯ ಮರಗಳನ್ನು ಬೆಳೆಸುವ ಉದ್ದೇಶದ ‘ತೇಗಸಿರಿ’ ರಾಜ್ಯವ್ಯಾಪಿ ಸಮಗ್ರ ವೃಕ್ಷಾಭಿವೃದ್ಧಿ ಯೋಜನೆಯ ಅನುಷ್ಠಾನಕ್ಕೆ ಮೂಡುಬಿದಿರೆ ತಾಲೂಕು ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ಸಮಿತಿಗಳನ್ನು ರಚಿಸುವಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ವಲಯಾರಣ್ಯಾಧಿಕಾರಿಗಳು ಸೂಚಿಸಿದ್ದಾರೆ.
‘ತೇಗಸಿರಿ’ ಯೋಜನೆಯನ್ನು ವಿ.ಬಿ.ಜಿ. ರಾಮ್ ಜಿ ಯೋಜನೆಯೊಂದಿಗೆ ಸಮನ್ವಯ ಸಾಧಿಸಿ ಪರಿಪೂರ್ಣವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳನ್ನು ರಚಿಸಲು ಸರ್ಕಾರ ಆದೇಶಿಸಿದೆ. ಈ ಕುರಿತು ಸರ್ಕಾರದ ಆದೇಶ ಸಂಖ್ಯೆ 97/FAP 2026, ದಿನಾಂಕ 23.10.2026ರಲ್ಲಿ ನಿರ್ದೇಶನ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಮೂಡುಬಿದಿರೆ ತಾಲೂಕು ಪಂಚಾಯತ್ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮಟ್ಟದ ಸಮಿತಿಯನ್ನು ರಚಿಸಬೇಕು. ಸರ್ಕಾರದ ಆದೇಶದಲ್ಲಿ ತಿಳಿಸಿರುವ ನಿರ್ದೇಶನಗಳಂತೆ ‘ರೈತ ಮಿತ್ರ’, ಬೇರ್ ಫೂಟ್ ಟೆಕ್ನಿಷಿಯನ್ಗಳು ಹಾಗೂ ಪಂಚಾಯಿತಿ ಸಿಬ್ಬಂದಿಯನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಅಲ್ಲದೆ, ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ ವಲಯ, ಮಂಗಳೂರು ಇವರ ಪತ್ರ ಸಂಖ್ಯೆ ಕೃ.ಸಂ.ಸಿ.ಆರ್-84/ತೇಗ ಸಿರಿ/2026-27, ದಿನಾಂಕ 04.11.2026ರ ಸೂಚನೆಯಂತೆ, ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲಾ ಮುಖ್ಯರಸ್ತೆ ಮತ್ತು ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಖಾಸಗಿ ಜಮೀನು ಹೊಂದಿರುವ ರೈತರ ಪಟ್ಟಿಯನ್ನು ಸಿದ್ಧಪಡಿಸಬೇಕು.
ಪ್ರತಿ ಫಲಾನುಭವಿಗೆ ಅಗತ್ಯವಿರುವ ಸಸಿಗಳ ಸಂಖ್ಯೆ ಮತ್ತು ಜಾತಿಗಳನ್ನು ಗುರುತಿಸಿ, ಕೌಟುಂಬಿಕ ಮಾಹಿತಿಯನ್ನೂ ಸಂಗ್ರಹಿಸಿ ತಾಲೂಕು ಮಟ್ಟದ ಸಮಿತಿಗೆ ದಿನಾಂಕ 20-11-2026ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಈ ಕುರಿತು ಮೂಡುಬಿದಿರೆ ತಾಲೂಕು ಪಂಚಾಯತ್ ಯ ಕಾರ್ಯನಿರ್ವಾಹಕ ಅಧಿಕಾರಿಗಳು ನವೆಂಬರ್ 18ರಂದು ಹೊರಡಿಸಿರುವ ಪತ್ರದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.