ಹಂಡೇಲು ಮಸೀದಿಯ ಖಬರಸ್ತಾನದ ಭೂಮಿ ವಿವಾದ: ಪರ್ಯಾಯ ಜಮೀನು ಮಂಜೂರಿಗೆ ಹೈಕೋಟ್೯ ಆದೇಶ

ಹಂಡೇಲು ಮಸೀದಿಯ ಖಬರಸ್ತಾನದ ಭೂಮಿ ವಿವಾದ: ಪರ್ಯಾಯ ಜಮೀನು ಮಂಜೂರಿಗೆ ಹೈಕೋಟ್೯ ಆದೇಶ


ಮೂಡುಬಿದಿರೆ: ಪುತ್ತಿಗೆ ಗ್ರಾಮದ ಮಸೀದಿಯ ಖಬರಸ್ತಾನಕ್ಕೆ ಸಂಬಂಧಿಸಿದ ಭೂಸ್ವಾಧೀನ ಮತ್ತು ಪರಿಹಾರದ ವಿವಾದದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಬಳಸಿಕೊಂಡ ಭೂಮಿಗೆ ಪರ್ಯಾಯ ಜಮೀನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು ಈ ಪ್ರಕ್ರಿಯೆಯನ್ನು ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ.

ಮೂಡಬಿದಿರೆ ತಾಲ್ಲೂಕಿನ ಪುತ್ತಿಗೆ ಗ್ರಾಮದ ಹಂಡೇಲ್‌ನ ಮೊಹಿಯುದ್ದೀನ್ ಜುಮಾ ಮಸೀದಿ-ಅಲ್ ಮದ್ರಸತುಲ್ ಖಾದ್ರಿಯ್ಯಾ ಸಂಸ್ಥೆಯು ಈ ಸಂಬಂಧ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಸಂಸ್ಥೆಯ ಅಧ್ಯಕ್ಷ ಎಚ್.ಎ. ಖಾದರ್ ಅವರ ಪ್ರತಿನಿಧಿತ್ವದಲ್ಲಿ ಸಲ್ಲಿಸಲಾದ ಈ ಅರ್ಜಿಯಲ್ಲಿ, ಸರ್ವೆ ನಂ. 628/2ರಲ್ಲಿರುವ 4.14 ಎಕರೆ ಜಮೀನನ್ನು ಮುಸ್ಲಿಂ ಸಮುದಾಯದ ಖಬರಸ್ತಾನಕ್ಕಾಗಿ ಮಂಜೂರು ಮಾಡಲಾಗಿತ್ತು ಎಂದು ತಿಳಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಈ ಜಮೀನಿನ ಭಾಗವನ್ನು ಸ್ವಾಧೀನಪಡಿಸಿಕೊಂಡ ಹಿನ್ನೆಲೆಯಲ್ಲಿ, ಪರಿಹಾರ ನೀಡುವ ವಿಚಾರದಲ್ಲಿ ವಿವಾದ ಉಂಟಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಜಮೀನು ಸರ್ಕಾರಕ್ಕೆ ಸೇರಿದ್ದು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಉಚಿತವಾಗಿ ಹಸ್ತಾಂತರಿಸಲಾಗಿದೆ ಎಂಬ ಕಾರಣ ನೀಡಿ ಪರಿಹಾರ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಮಸೀದಿ ಆಡಳಿತ ಮಂಡಳಿ ನ್ಯಾಯಾಲಯದ ಮೊರೆ ಹೋಗಿತ್ತು.

ನ್ಯಾಯಾಲಯದ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ಮೂರು ತಿಂಗಳೊಳಗೆ ಪರ್ಯಾಯ ಜಮೀನು ಮಂಜೂರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಪರ್ಯಾಯ ಜಮೀನಿಗೆ ಮಸೀದಿಯಿಂದ ಸಂಪರ್ಕ ಮಾರ್ಗ ಕಲ್ಪಿಸುವಂತೆ ಅರ್ಜಿದಾರರು ಮನವಿ ಸಲ್ಲಿಸಿದಲ್ಲಿ, ಅದನ್ನು ಕಾನೂನಿನ ಪ್ರಕಾರ ಪರಿಗಣಿಸಬೇಕು ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅರ್ಜಿದಾರರ ಪರ ದೀವೀನ್ ವರ್ಮಾ ಬಿ. ವಾದ ಮಂಡಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article