ಬಿಜೆಪಿ ವಿರುದ್ಧ ಮನೋಸ್ಥಿತಿ ಮತಗಳ ಅಳಿಸುವ ಹುನ್ನಾರ: ಎಂ.ಜಿ. ಹೆಗ್ಡೆ

ಬಿಜೆಪಿ ವಿರುದ್ಧ ಮನೋಸ್ಥಿತಿ ಮತಗಳ ಅಳಿಸುವ ಹುನ್ನಾರ: ಎಂ.ಜಿ. ಹೆಗ್ಡೆ


ಪುತ್ತೂರು: ಎಸ್‌ಐಆರ್ ಉದ್ದೇಶ ಸಂಪೂರ್ಣ ದುರುದ್ದೇಶದಿಂದ ಕೂಡಿದ್ದು, ಬಿಜೆಪಿಯ ವಿರುದ್ದದ ಮನೋಸ್ಥಿತಿಯ ಮತದಾರರ ಹೆಸರು ಅಳಿಸುವ ಹುನ್ನಾರವಾಗಿದೆ. ಪಾರ್ಲಿಮೆಂಟಿನಲ್ಲಿ ನಡೆಯಬೇಕಾದ ತೀರ್ಮಾನಗಳು ನಾಗಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆಯುತ್ತಿದೆ. ಅಲ್ಪಸಂಖ್ಯಾತರ ಮತಗಳನ್ನು ಇಲ್ಲವಾಗಿಸುವ ತಂತ್ರ ಇದರಲ್ಲಿ ಅಡಗಿದೆ. ಇದರ ವಿರುದ್ದ ಹೋರಾಟ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗ್ಡೆ ಹೇಳಿದರು. 

ಅವರು ಇಂಡಿಯಾ ಒಕ್ಕೂಟ ಸಮಾನ ಮನಸ್ಕ ಪಕ್ಷಗಳ ಮತ್ತು ಸಂಘಟನೆಗಳ ವತಿಯಿಂದ ಪುತ್ತೂರು ಜನಾಧಿಕಾರ ಆಂದೋಲನ ವೇದಿಕೆಯ ನೇತೃತ್ವದಲ್ಲಿ  ಎಸ್‌ಐಆರ್ ಅವೈಜ್ಞಾನಿಕ ಪರಿಷ್ಕರಣೆ ವಿರೋಧಿಸಿ ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪುತ್ತೂರಿನ ತಾಲೂಕು ಆಡಳಿತ ಸೌಧದ ಮುಂಬಾಗದಲ್ಲಿರುವ ಅಮರ್ ಜವಾಜ್ ಜ್ಯೋತಿ ಸ್ಮಾರಕದ ಬಳಿಯಲ್ಲಿ ‘ಮತ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ’ ಎಂಬ ಘೋಷಣೆಯ ಅಡಿಯಲ್ಲಿ ಸೋಮವಾರ ನಡೆದ ತಿರಂಗಾ ಜಾಥಾ ಮತ್ತು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. 

ಎಸ್‌ಐಆರ್ ಸಾವರ್ಕರ್ ಮತ್ತು ಗೋಡ್ಸೆ ಸಿದ್ದಾಂತವನ್ನು ಒಳಗೊಂಡಿದೆ. 100 ವರ್ಷಗಳ ಹಿಂದೆ ಆರಂಭಗೊಂಡಿರುವ ಆರ್‌ಎಸ್‌ಎಸ್ ಎಂಬ ಸಂಘಟನೆಯು ನಿಧಾನಕ್ಕೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿಯೊಳಗೆ ಸೇರಿಕೊಂಡು ಬಳಿಕ ದೇವಸ್ಥಾನದೊಳಗೂ ಪ್ರವೇಶ ಮಾಡಿತು. ಈ ಎಲ್ಲಾ ಸಂದರ್ಭದಲ್ಲಿಯೂ ನಾವು ಮೌನವಾಗಿದ್ದೆವು. 1989ರಲ್ಲಿ ರಾಮ ಜನ್ಮಭೂಮಿ ಹೆಸರು ಹೇಳಿ ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜನೆ ಮಾಡಿದರು. 

ಬಳಿಕ ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಪರಸ್ಪರ ನಂಬಿಕೆಗಳು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಕಡ್ಡಿ ಗೀರುತ್ತಲೇ ಇದ್ದಾರೆ. ಬಿಜೆಪಿ ಸರ್ಕಾರ ಇವಿಎಂನಲ್ಲಿ ಮೋಸ ಮಾಡಿದೆ ಎಂಬ ಗಲಾಟೆ ಆರಂಭಗೊಂಡ ಬೆನ್ನಲ್ಲೇ ಎಸ್‌ಐಆರ್ ಆರಂಭಿಸಲಾಯಿತು. ಸಾವರ್ಕರ್ ಅಲ್ಪ ಸಂಖ್ಯಾತರಿಗೆ ಮತದಾನದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿದ್ದರು. ಗೋಡ್ಸೆ ಮತ್ತು ಆರ್‌ಎಸ್‌ಎಸ್ ಅದನ್ನು ಬೆಂಬಲಿಸಿತ್ತು. ಅವೆಲ್ಲವನ್ನೂ ಒಪ್ಪಿಕೊಂಡಿರುವ ಬಿಜೆಪಿ ಇದೀಗ ಎಸ್‌ಐಆರ್ ಜಾರಿಗೊಳಿಸಿ ಅಲ್ಪ ಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮತವನ್ನು ಅಳಿಸುವ ಕಾರ್ಯ ನಡೆಸುತ್ತಿದೆ. ಹಂತ ಹಂತವಾಗಿ ದೇಶದ ಅಸ್ಮಿತೆಯನ್ನು ಕೊಲ್ಲುವುದು ಇವರ ಉದ್ದೇಶವಾಗಿದೆ. ಭಾರತದ ಮಣ್ಣಿಗೆ ಇಂತಹ ಷಡ್ಯಂತ್ರವನ್ನು ತಡೆಯುವ ಶಕ್ತಿಯಿದೆ. ಇಲ್ಲಿನ ಪ್ರಜಾಪ್ರಭುತ್ವವನ್ನು ಮುಟ್ಟುವುದಕ್ಕೂ ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು. 

ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ವಕ್ತಾರರಾದ ಪುತ್ತೂರು ಜನಾಧಿಕಾರ ಆಂದೋಲನ ವೇದಿಕೆಯ ಸಂಚಾಲಕ ಅಮಳ ರಾಮಚಂದ್ರ, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ದ.ಕ. ಜಿಲ್ಲಾ ಮುಖಂಡ ಸರ್ಫರಾಜ್, ಸಾಮಾಜಿಕ ಚಿಂತಕ ರಾಘವೇಂದ್ರ ಹಾಲ್ಕೆರೆ, ರಾಜ್ಯ ರೈತ ಸಂಘ ಹಸಿರು ಸೇನೆಯ ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಮಾತನಾಡಿದರು. 

ಪುತ್ತೂರಿನ ಕೆಎಸ್ಸಾರ್ಟಿಸಿ ಬಳಿಯಿಂದ ಅಮರ್ ಜವಾಜ್ ಜ್ಯೋತಿ ಸ್ಮಾರಕದ ತನಕ ತಿರಂಗಾಜಾಥಾ ನಡೆಯಿತು.  

ಪ್ರತಿಭಟನೆಯಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರಾದ ಎಂ.ಎಸ್. ಮಹಮ್ಮದ್, ಕೃಷ್ಣಪ್ರಸಾದ್ ಆಳ್ವ, ಅಬ್ದುಲ್ ರಹಿಮಾನ್ ಆಝಾದ್, ರಾಮಣ್ಣ ವಿಟ್ಲ, ಉಮಾನಾಥ ಶೆಟ್ಟಿ ಪೆರ್ನೆ, ಎಂ.ಬಿ.ವಿಶ್ವನಾಥ ರೈ, ಯು.ಟಿ ತೌಸೀಫ್, ಡಾ.ರಾಜಾರಾಂ, ಪ್ರವೀಣ್ ಚಂದ್ರ ಆಳ್ವ, ರಮಾನಾಥ ವಿಟ್ಲ, ದುರ್ಗಾಪ್ರಸಾದ್ ರೈ ಕುಂಬ್ರ, ಮಹಮ್ಮದ್ ರಿಯಾಝ್ ಪರ್ಲಡ್ಕ, ಪ್ರಸಾದ್ ಕೌಶಲ್ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ಹೆಚ್. ಮಹಮ್ಮದ್ ಆಲಿ, ಶ್ರೀಧರ ರೈ ಬೈಲುಗುತ್ತು, ಖಾದರ್ ಮೇರ್ಲ, ಸಂತೋಷ್ ಚಿಲ್ಮೆತ್ತಾರ್, ಯೂಸುಫ್ ಡ್ರೀಮ್, ರೋಶನ್ ರೈ ಬನ್ನೂರು, ಅನ್ವರ್ ಖಾಸಿಂ, ಮುರಳೀಧರ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. 

ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಕಾರ್ಯಕ್ರಮ ನಿರೂಪಿಸಿದರು. ಬಾತಿಷ ಅಳಕೆಮಜಲು, ಸಿಪಿಎಂ ಮುಖಂಡ ರಾಮಣ್ಣ ವಿಟ್ಲ, ಶರೂನ್ ಸಿಕ್ವೇರಾ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article