ದೇವಳಕ್ಕೆ ಅನುದಾನ ನೀಡದ ಸಚಿವ-ಅಧಿಕಾರಿ: ಬದಲಾವಣೆಗೆ ಜೆಡಿಎಸ್ ರಂಗನಾಥ್ ಆಗ್ರಹ
ಅವರು ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿ ದೇವರ ದರ್ಶನ ಪಡೆದು ಬಂದಿದ್ದು, ಅಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಇರುವುದು ಗಮನಕ್ಕೆ ಬಂದಿದೆ. ಆದರೆ ಸಚಿವರು ಈ ದೇವಸ್ಥಾನಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ ಎಂಬ ವಿಚಾರ ಕೂಡ ಗಮನಕ್ಕೆ ಬಂತು. ಅಂತವರಿಗೆ ಯಾಕೆ ರಾಜ್ಯ ಸರಕಾರ ಅಧಿಕಾರ ನೀಡಿದೆ, ಜತೆಗೆ ದೇವಸ್ಥಾನದ ಅಭಿವೃದ್ಧಿಯ ಕುರಿತು ಆಸಕ್ತಿ ಇಲ್ಲದ ಅಧಿಕಾರಿಯನ್ನೂ ಕೂಡ ಸರಕಾರ ಬದಲಾವಣೆ ಮಾಡಬೇಕು ಎಂಬುದು ನಮ್ಮ ಆಗ್ರಹ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ರಾಜ್ಯ ಸರಕಾರವು ಜಿ.ಪಂ., ತಾ.ಪಂ., ನಗರ-ಗ್ರಾಮೀಣ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ಮಾಡದೆ ಕಾಲಹರಣ ಮಾಡುತ್ತಿದೆ. ಯಾವಾಗಲೂ ಸಂವಿಧಾನದ ಕುರಿತು ಮಾತನಾಡುವ ಕಾಂಗ್ರೇಸ್ ವರಿಷ್ಠ ರಾಹುಲ್ ಗಾಂಧಿಯವರು ಸಂವಿಧಾನದ ಆಶಯದಂತೆ ರಾಜ್ಯದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನ ಇತರ ನಾಯಕರಿಗೆ ಚುನಾವಣೆ ನಡೆಸುವಂತೆ ನಿದರ್ಶನ ನೀಡಬೇಕು. ಸೋಲುವುದು ಖಚಿತವಾದರೂ ಚುನಾವಣೆ ಮಾಡಿ ಎಂದು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಬೇಕು.
ರಾಜ್ಯದಲ್ಲಿ 52 ಸಾವಿರಕ್ಕೂ ಅಧಿಕ ಶಿಕ್ಷಕರು ಹುದ್ದೆಗಳು ಖಾಲಿ ಇದ್ದು, ಅದರ ಭರ್ತಿಗೂ ಸರ್ಕಾರ ಆಸಕ್ತಿ ವಹಿಸಿಲ್ಲ. ಸರಕಾರಿ ನೌಕರರಿಗೆ ಒಪಿಎಸ್ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಬೇಕು. ಆಶಾ ಕಾರ್ಯಕರ್ತೆಯರು ತಮ್ಮ ವೇತನ-ಸೌಲಭ್ಯಕ್ಕಾಗಿ ನಿರಂತರ ಹೋರಾಟ ಮಾಡಬೇಕಾದ ಸ್ಥಿತಿ ಇದೆ. ಬೆಂಗಳೂರಿನ ಪ್ರಿಡಂಪಾರ್ಕ್‌ನ ನಿರಂತರ ಪ್ರತಿಭಟನೆಯು ಸರ್ಕಾರ ಅಂತ್ಯದ ಸೂಚನೆಯಾಗಿದೆ. ಮುಂದೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದರು.
ಜೆಡಿಎಸ್ ಪ್ರಮುಖರಾದ ವಸಂತ ಪೂಜಾರಿ, ಶಶಿರಾಜ್ ಶೆಟ್ಟಿ ಕೊಳಂಬೆ, ಅಶ್ರಫ್ ಕಲ್ಲೇಗ, ಶ್ರೇಯಾಂಸ್ ಕುಮಾರ್, ವಿಕ್ಟರ್ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು.