ರಾಜ್ಯದ ಭೂಪಟದಲ್ಲಿ ಶಾಶ್ವತ ಸ್ಥಾನ-ಸಾಧನೆಗೆ ದೊರೆತ ಮನ್ನಣೆ: ಸವಣೂರು ‘ಹೆಜ್ಜೆಗುರುತು’ಗೆ ಸಾಕ್ಷಿಯಾದ ಸಹಕಾರರತ್ನ ಸೀತಾರಾಮ ರೈ

ರಾಜ್ಯದ ಭೂಪಟದಲ್ಲಿ ಶಾಶ್ವತ ಸ್ಥಾನ-ಸಾಧನೆಗೆ ದೊರೆತ ಮನ್ನಣೆ: ಸವಣೂರು ‘ಹೆಜ್ಜೆಗುರುತು’ಗೆ ಸಾಕ್ಷಿಯಾದ ಸಹಕಾರರತ್ನ ಸೀತಾರಾಮ ರೈ


ಪುತ್ತೂರು: ರಾಜ್ಯದ ಭೂಪಟದಲ್ಲಿ ಸವಣೂರಿಗೊಂದು ಶಾಶ್ವತ ಸ್ಥಾನ ಕಲ್ಪಿಸುವ ಮೂಲಕ ಸವಣೂರು ಶಿಲ್ಪಿ ಎಂಬ ಖ್ಯಾತಿ ಪಡೆದುಕೊಂಡಿರುವ ಸವಣೂರು ಸೀತಾರಾಮ ರೈ ಅವರ ಹೆಜ್ಜೆಗುರುತುಗಳಿಗೆ ಸವಣೂರು ಸದಾ ಸಾಕ್ಷಿಯಾಗಿದೆ. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಸ್ತಿತ್ವಕ್ಕೆ ಮುನ್ನುಡಿ ಬರೆದಿರುವುದೇ ಸವಣೂರು. ತನ್ನ ಎಲ್ಲಾ ಶಾಖೆಗಳ ಮೂಲಕ 2025-26ನೇ ಸಾಲಿನಲ್ಲಿ 1078 ಕೋಟಿ ವ್ಯವಹಾರ ಮತ್ತು 2.60ಕೋಟಿ ಲಾಭ ಗಳಿಸಿದ ಹಿರಿಮೆ. 195 ಕೋಟಿ ಠೇವಣಿ, 17 ಶಾಖೆಗಳು, 208.05 ಕೋಟಿ ದುಡಿಯುವ ಬಂಡವಾಳ, 32 ಸಾವಿರ ಮಂದಿ ಸದಸ್ಯರಿಗೆ ಶೇ.19 ಡಿವಿಡೆಂಟ್, 3.52 ಕೋಟಿ ಪಾಲು ಬಂಡವಾಳ 161 ಕೋಟಿ ಸಾಲ ಹೀಗೆ ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯವಾಗಿ ಬೆಳೆದ ಸಂಸ್ಥೆಗೆ ಈಗ 25ರ ಹರೆಯ.


ಪುತ್ತೂರು ತಾಲೂಕಿನ ಸವಣೂರು ಸೀತಾರಾಮ ರೈ ಎಂಬ ಹೆಸರು ಸಹಕಾರಿ ಕ್ಷೇತ್ರದಲ್ಲಿ ಚಿರಪರಿಚಿತ. ಸಹಕಾರರತ್ನ ಪುರಸ್ಕೃತರಾದ ಇವರ ನೂರಾರು ಕನಸುಗಳಿಗೂ ಸವಣೂರಿಗೂ ಅವಿನಾಭಾವ ಸಂಬಂಧ ಇದೆ. ಅದಕ್ಕಾಗಿಯೇ ಸಂಘದ ಒಂದಷ್ಟು ಪಾಲನ್ನು ವಿದ್ಯಾರ್ಥಿಗಳ ಪಾಲಿಗೆ ನೀಡುತ್ತಲೇ ಬಂದಿದ್ದಾರೆ. ಈ ತನಕ 1545 ಮಕ್ಕಳಿಗೆ ರೂ31.19 ಲಕ್ಷ ಸಹಾಯಧನ ನೀಡಿದ ಹೆಮ್ಮೆಯೂ ಇವರದ್ದಾಗಿದೆ. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಜಿಲ್ಲಾ ವ್ಯಾಪ್ತಿಯನ್ನು ಮೀರಿ ಹೊರಜಿಲ್ಲೆಗಳಿಗೂ ಕಾಲಿಡುವ ಕೆಲಸ ಮುಂದಿನ ಜನವರಿ ತಿಂಗಳಲ್ಲಿ ನಡೆಯಲಿದೆ. ಕೊಡಗು ಮತ್ತು ಉಡುಪಿ ಜಿಲ್ಲೆಯಲ್ಲಿ ಸಂಘ 18 ಮತ್ತು 19ನೇ ಶಾಖೆ ಆರಂಭವಾಗಲಿದೆ. 

7 ಬಾರಿ ಸಾಧನಾಪ್ರಶಸ್ತಿಯ ಗರಿ:

ಕಳೆದ 24 ವರ್ಷಗಳ ಸಾಧನೆಗೆ ಅವಿಭಜಿತ ದಕ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು 2 ಬಾರಿ ಪಡೆದುಕೊಂಡ ಜತೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ನೀಡುವ ಸಾಧನಾ ಪ್ರಶಸ್ತಿಯನ್ನು 7 ಬಾರಿ ಬಾಚಿಕೊಂಡ ಹೆಗ್ಗಳಿಕೆಯೂ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ್ದಾಗಿದೆ. ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ ರೋಡು, ಕಲ್ಲಡ್ಕ, ಮಂಗಳೂರಿನ ಪಾಂಡೇಶ್ವರ ಹಾಗೂ ಈಶ್ವರಮಂಗಲದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಶಾಖೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಭಾಗದ ಜನತೆಯ ಆರ್ಥಿಕ ಭದ್ರತೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿರುವುದು ಸವಣೂರು ಸೀತಾರಾಮ ರೈ ಅವರ ಸಹಕಾರಿ ಕ್ಷೇತ್ರದ ಸಾಧನೆ.

ಸಹಕಾರ ಕ್ಷೇತ್ರದ ಜತೆಗೆ ಸವಣೂರು ಎಂಬ ಹಳ್ಳಿಯನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳಿಸಿದ ಖ್ಯಾತಿಯೂ ಇವರಿಗೆ ಸಲ್ಲುತ್ತದೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಬದುಕಿಗೆ ಪ್ರೇರಣೆಯಾಗುವಂತೆ ವಿದ್ಯಾರಶ್ಮಿ ವಿದ್ಯಾಸಂಸ್ಥೆ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾಗಿದೆ. ಇದೀಗ ಪುತ್ತೂರಿನಲ್ಲಿದ್ದ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕೇಂದ್ರ ಕಚೇರಿಯನ್ನೂ ಸವಣೂರಿಗೆ ಸ್ಥಳಾಂತರಿಸುವ ಅವರ ಕನಸು ಸೋಮವಾರ ನನಸಾಗಲಿದೆ. 

ಅದಕ್ಕಾಗಿ ಸಂಘದ ಹೆಸರಲ್ಲಿ 1.29 ಕೋಟಿ ವೆಚ್ಚದಲ್ಲಿ ಸ್ಥಿರಾಸ್ತಿಯನ್ನು ಖರೀದಿ ಮಾಡಿ 5 ಕೋಟಿ ವೆಚ್ಚದ ಕೇಂದ್ರ ಕಚೇರಿ, ಸವಣೂರು ಶಾಖೆ, ವಾಣಿಜ್ಯ ಸಂಕೀರ್ಣದ ಲೋಕಾರ್ಪಣೆ ಸವಣೂರಿಗೆ ಮತ್ತಷ್ಟು ಹೆಗ್ಗಳಿಕೆಯನ್ನು ತರಲಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತನ್ನೂರನ್ನು ಬೆಳೆಸುವ ಸೀತಾರಾಮ ರೈ ಅವರ ಕನಸು ಸಂಘದ ರಜತಮಹೋತ್ಸವದ ಸಂದರ್ಭದಲ್ಲಿ ಈಡೇರಲಿದೆ ಎಂಬುವುದು ಸವಣೂರಿಗೆ ಹೆಮ್ಮೆ ತರಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article