ಕುಕ್ಕೆ ಸುಬ್ರಹ್ಮಣ್ಯದ ಸ್ವಚ್ಛತೆ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇ?: ಮಹತ್ವದ ಸಭೆಗೆ ಗ್ರಾಮಸ್ಥರ ನೀರಸ ಪ್ರತಿಕ್ರಿಯೆ!

ಕುಕ್ಕೆ ಸುಬ್ರಹ್ಮಣ್ಯದ ಸ್ವಚ್ಛತೆ ಬಗ್ಗೆ ಯಾರಿಗೂ ಕಾಳಜಿ ಇಲ್ಲವೇ?: ಮಹತ್ವದ ಸಭೆಗೆ ಗ್ರಾಮಸ್ಥರ ನೀರಸ ಪ್ರತಿಕ್ರಿಯೆ!


ಸುಬ್ರಹ್ಮಣ್ಯ: 25 ಸಾವಿರಕ್ಕೂ ಅಧಿಕ ಜನಸಂಖ್ಯೆಯ ಗ್ರಾಮದಲ್ಲಿ ಸ್ವಚ್ಛತಾ ಜಾಗೃತಿ ಸಭೆಗೆ ಹಾಜರಾದವರು ಕೇವಲ 20 ಮಂದಿ! ದೇವಸ್ಥಾನದ ಪ್ರತಿನಿಧಿಗಳೂ ಗೈರು? ಖಾಲಿ ಕುರ್ಚಿಗಳೇ ಸಭೆಯ ಪ್ರಮುಖ ಚಿತ್ರಣ ಘಟನೆ ಶುಕ್ರವಾರ ಸುಬ್ರಹ್ಮಣ್ಯದಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಂತಹ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವುದು ಕೇವಲ ಗ್ರಾಮ ಪಂಚಾಯತ್‌ನ ಜವಾಬ್ದಾರಿಯಷ್ಟೇ ಅಲ್ಲ, ದೇವಸ್ಥಾನದ ಆಡಳಿತ ಮಂಡಳಿ, ಸ್ಥಳೀಯ ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು ಹಾಗೂ ಪ್ರತಿಯೊಬ್ಬ ನಾಗರಿಕರ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಆದರೆ ಇದೇ ಸ್ವಚ್ಛತೆಯ ಕುರಿತು ಚರ್ಚಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ಪಡೆದು ಕ್ಷೇತ್ರವನ್ನು ಇನ್ನಷ್ಟು ಸ್ವಚ್ಛವಾಗಿಸುವ ಉದ್ದೇಶದಿಂದ ಕರೆಯಲಾಗಿದ್ದ ವಿಶೇಷ ಸಭೆಗೆ ವ್ಯಕ್ತವಾದ ಪ್ರತಿಕ್ರಿಯೆ ಮಾತ್ರ ನಿರಾಸೆ ಮೂಡಿಸಿದೆ.

ಕಡಬ ತಾಲೂಕು ಮಹಾತ್ಮ ಗಾಂಧಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಸ್ಥಳೀಯ ಜನಸಂಖ್ಯೆಯಿದ್ದು, ಹೊರಗ್ರಾಮ ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯೋಗ ಮಾಡುತ್ತಿರುವವರನ್ನೂ ಸೇರಿಸಿದರೆ ಸುಮಾರು ೨೫ ಸಾವಿರ ಜನರ ಚಟುವಟಿಕೆಗಳಿರುವ ಪ್ರದೇಶವಾಗಿದೆ. ಇಂತಹ ದೊಡ್ಡ ಜನಸಮೂಹದ ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಮಶಾನದ ನಿರ್ವಹಣೆ ಕುರಿತು ಚರ್ಚಿಸಲು ನ.12 ರಂದು ಮಧ್ಯಾಹ್ನ 2.30ಕ್ಕೆ ವಿಶೇಷ ಸಭೆ ಕರೆಯಲಾಗಿತ್ತು.

ಗ್ರಾಮ ಪಂಚಾಯತ್ ವತಿಯಿಂದ ಪತ್ರಮುಖೇನ ಸಭೆಯ ಮಾಹಿತಿಯನ್ನು ನೀಡಲಾಗಿದ್ದರೂ, ನಿಗದಿತ ಸಮಯಕ್ಕೆ ಸಭೆ ಆರಂಭವಾಗಲಿಲ್ಲ. ಸಾಕಷ್ಟು ಪ್ರಯತ್ನಗಳ ಬಳಿಕ ಮಧ್ಯಾಹ್ನ ಸುಮಾರು 3.15ಕ್ಕೆ ಸಭೆ ಆರಂಭವಾಯಿತು. ಆದರೆ ಸಭೆಯಲ್ಲಿದ್ದವರ ಸಂಖ್ಯೆ ಮಾತ್ರ ಆಯೋಜಕರ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳನ್ನು ಹೊರತುಪಡಿಸಿ ಗ್ರಾಮಸ್ಥರ ಪೈಕಿ ಕೇವಲ 20 ಮಂದಿ ಮಾತ್ರ ಭಾಗವಹಿಸಿದ್ದರು ಎಂಬುದು ಗಮನಾರ್ಹ ಸಂಗತಿ.

ಇನ್ನೂ ಅಚ್ಚರಿಯ ಸಂಗತಿಯೆಂದರೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಯಾವುದೇ ಅಧಿಕೃತ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿರಲಿಲ್ಲ. ಸಾವಿರಾರು ಭಕ್ತರು ಆಗಮಿಸುವ ಕ್ಷೇತ್ರದ ಸ್ವಚ್ಛತೆ ಕುರಿತು ನಡೆಯುವ ಮಹತ್ವದ ಸಭೆಯಲ್ಲಿ ದೇವಸ್ಥಾನದ ಪ್ರತಿನಿಧಿಗಳ ಗೈರುಹಾಜರಿ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿಸಿದೆ.

ಸ್ವಚ್ಛತಾ ಜಾಗೃತಿ, ಕಸ ವಿಲೇವಾರಿ, ಸಾರ್ವಜನಿಕ ಸ್ಥಳಗಳ ನಿರ್ವಹಣೆ ಹಾಗೂ ಸ್ಮಶಾನದ ವ್ಯವಸ್ಥೆ ಕುರಿತು ಚರ್ಚಿಸಲು ಕರೆದ ಸಭೆಯಲ್ಲೇ ಜನರ ಭಾಗವಹಿಸುವಿಕೆ ಇಷ್ಟೊಂದು ಕಡಿಮೆಯಾದರೆ, ಕ್ಷೇತ್ರದ ಸ್ವಚ್ಛತೆಯನ್ನು ಸಾಮೂಹಿಕವಾಗಿ ಹೇಗೆ ಕಾಪಾಡುವುದು ಎಂಬ ಪ್ರಶ್ನೆ ಎದುರಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಕೆಲವರು, ‘ಕುಕ್ಕೆ ಶ್ರೀ ಕ್ಷೇತ್ರದ ಸ್ವಚ್ಛತೆ ಯಾರಿಗೂ ಬೇಡವೇ? ಇಂತಹ ಮಹತ್ವದ ವಿಚಾರದಲ್ಲೂ ಜನರು ಆಸಕ್ತಿ ತೋರಿಸದಿದ್ದರೆ ಕ್ಷೇತ್ರವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ಯಾರದ್ದು?’ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯ ವೇದಿಕೆಯಲ್ಲಿ ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯ ಪವನ್ ಎಂ.ಡಿ., ಮಾಜಿ ಉಪಾಧ್ಯಕ್ಷ ರಾಜೇಶ್ ಎನ್.ಎಸ್., ಸ್ಮಶಾನ ನಿರ್ವಹಣಾ ಸಮಿತಿ ಅಧ್ಯಕ್ಷ ಯಜ್ಞೇಶ್ ಆಚಾರ್ಯ ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಉಪಸ್ಥಿತರಿದ್ದರು.

ಕ್ಷೇತ್ರದ ಸ್ವಚ್ಛತೆ ಎಲ್ಲರ ಜವಾಬ್ದಾರಿಯಲ್ಲವೇ?

ಕುಕ್ಕೆ ಸುಬ್ರಹ್ಮಣ್ಯ ಕೇವಲ ಒಂದು ಗ್ರಾಮವಲ್ಲ. ಇದು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುವ ಪ್ರಮುಖ ಧಾರ್ಮಿಕ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು.

ಸ್ವಚ್ಛತೆಯ ಬಗ್ಗೆ ಸಭೆ ಕರೆಯುವುದಷ್ಟೇ ಸಾಕಾಗುವುದಿಲ್ಲ. ಸಭೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ, ದೇವಸ್ಥಾನದ ಆಡಳಿತದ ಸಹಕಾರ, ವ್ಯಾಪಾರಸ್ಥರ ಜವಾಬ್ದಾರಿ ಹಾಗೂ ಅಧಿಕಾರಿಗಳ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ.

ಮುಂದಿನ ದಿನಗಳಲ್ಲಾದರೂ ಇಂತಹ ಸಭೆಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವಸ್ಥಾನದ ಆಡಳಿತ ಮಂಡಳಿಯೂ ಸಕ್ರಿಯವಾಗಿ ಕೈಜೋಡಿಸಿ, ಕುಕ್ಕೆ ಶ್ರೀ ಕ್ಷೇತ್ರವನ್ನು ಸ್ವಚ್ಛ ಹಾಗೂ ಮಾದರಿ ಕ್ಷೇತ್ರವನ್ನಾಗಿಸಲು ಮುಂದಾಗಬೇಕಿದೆ.

ಸ್ವಚ್ಛ ಕುಕ್ಕೆ ನಿರ್ಮಾಣವಾಗಬೇಕಾದರೆ ಜವಾಬ್ದಾರಿಯಿಂದ ಹಿಂದೆ ಸರಿಯದೆ ಎಲ್ಲರೂ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಕುಕ್ಕೆ ಸುಬ್ಬಪ್ಪ ಎಲ್ಲರಿಗೂ ಸದ್ಬುದ್ಧಿ ನೀಡಲಿ ಎಂಬುದೇ ಭಕ್ತರ ಆಶಯ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article